Home Lead News ಎಸ್‌ಎಸ್‌ಎಲ್‌ಸಿ ದಾಖಲೆ ಫಲಿತಾಂಶ

ಎಸ್‌ಎಸ್‌ಎಲ್‌ಸಿ ದಾಖಲೆ ಫಲಿತಾಂಶ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಎಸ್‌ಎಸ್ ಎಲ್‌ಸಿ ಫಲಿತಾಂಶವನ್ನು ಪ್ರಕಟಿಸಿದರು.

ಬೆಂಗಳೂರು, ಏ. ೨೩- ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ. ೯೪.೧ ರಷ್ಟು ಫಲಿತಾಂಶ ಬಂದಿದೆ.


ಎಂದಿನಂತೆ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದು, ಏಳು ಮಂದಿ ವಿದ್ಯಾರ್ಥಿಗಳು ೬೨೫ ಕ್ಕೆ ೬೨೫ ಅಂಕ ಪಡೆದು ಪ್ರಥಮ ರ್ಯಾಂಕ್ ಹಂಚಿಕೊಂಡಿದ್ದಾರೆ.


ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ೭೭೦೨೦೯ ವಿದ್ಯಾರ್ಥಿಗಳು ಬರೆದಿದ್ದು, ಇವರಲ್ಲಿ ೭೨೪೭೯೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ. ೯೪.೧ ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಶೇ. ೧೪ ರಷ್ಟು ಫಲಿತಾಂಶ ಹೆಚ್ಚಾಗಿದ್ದು, ಈ ಬಾರಿಯ ಫಲಿತಾಂಶ ದಾಖಲೆಯ ಫಲಿತಾಂಶವಾಗಿದೆ.


ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿಂದು ಪ್ರಕಟಿಸಿ, ಫಲಿತಾಂಶದ ವಿವರಗಳನ್ನು ನೀಡಿದರು.
ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಉಡುಪಿ ೨ನೇ ಸ್ಥಾನದಲ್ಲಿ, ಉತ್ತರ ಕನ್ನಡ ೩ನೇ ಸ್ಥಾನದಲ್ಲಿದ್ದರೆ, ಕಲಬುರುಗಿ ಜಿಲ್ಲೆಯ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ.


ಉತ್ತೀರ್ಣತೆಯಲ್ಲಿ ಎಂದಿನಂತೆ ಬಾಲಕಿಯರೆ ಬಾಲಕರಿಗಿಂತ ಮುಂದಿದ್ದು, ಬಾಲಕಿಯರ ಉತ್ತೀರ್ಣತೆ ಶೇ. ೯೬.೧ ರಷ್ಟಿದ್ದರೆ, ಬಾಲಕರ ಉತ್ತೀರ್ಣತೆ ಪ್ರಮಾಣ ಶೇ. ೯೧.೯೪ ರಷ್ಟಿದೆ.


ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೆ ನಗರ ಭಾಗದ ವಿದ್ಯಾರ್ಥಿಗಳಿಗಿಂತ ಹೆಚ್ಚು ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತೀರ್ಣತೆ ಪ್ರಮಾಣ ಶೇ. ೯೪.೮೦ ರಷ್ಟಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳ ಉತ್ತೀರ್ಣತೆ ಪ್ರಮಾಣ ಶೇ. ೯೩.೨ ರಷ್ಟು.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ. ೯೬.೧೬ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಶೇ. ೯೨. ೬ ರಷ್ಟಿದೆ.


ಈ ಬಾರಿಯ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಶೇ. ೯೨.೪ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ಪರಿಶಿಷ್ಟ ಪಂಗಡದ ಶೇ. ೯೩.೧೭ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಶೇ. ೯೫.೩೫ ರಷ್ಟಿದೆ.
ದಿವ್ಯ ಚೇತನ ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಶೇ. ೮೮ ರಷ್ಟಿದೆ.


ಪ್ರಥಮ ಭಾಷೆ ಕನ್ನಡದಲ್ಲಿ ೧೦,೩೪೧ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದರೆ, ಇಂಗೀಷ್ ಭಾಷೆಯಲ್ಲಿ ೪೩ ವಿದ್ಯಾರ್ಥಿಗಳು ೧೦೦ ಕ್ಕೆ ನೂರು, ಉರ್ದುವಿನಲ್ಲಿ ೪೪೮ ವಿದ್ಯಾರ್ಥಿಗಳು ನೂರಕ್ಕೆ ನೂರು, ಮರಾಠಿಯಲ್ಲಿ ೯೦ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.


ತೃತೀಯ ಭಾಷೆ ಇಂಗ್ಲೀಷ್‌ನಲ್ಲಿ ೩೧,೨೫೧ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಗಣಿತದಲ್ಲಿ ೧೨೬೪ ವಿದ್ಯಾರ್ಥಿಗಲು ನೂರಕ್ಕೆ ನೂರು ಅಂಕ ಪಡೆದಿದ್ದು, ವಿಜ್ಞಾನದಲ್ಲಿ ೫೩೬ ವಿದ್ಯಾರ್ಥಿಗಳು ನೂರಕ್ಕೆ ನೂರು, ಸಮಾಜ ವಿಜ್ಞಾನದಲ್ಲಿ ೧೦,೬೮೬ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.


ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೭೭ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದರೆ ೬೧೭೬ ಶಾಲೆಗಳಲ್ಲಿ ಶೇ. ೧೦೦ಕ್ಕೆ ೧೦೦ ರಷ್ಟು ಫಲಿತಾಂಶ ಬಂದಿದೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೯.೪೧ ರಷ್ಟು ವಿದ್ಯಾರ್ಥಿಗಳು ಎ ಪ್ಲಸ್ ಗ್ರೇಡ್ ಅಂದರೆ ಶೇ. ೯೦ ರಿಂದ ೧೦೦ ಅಂಕ ಪಡೆದಿದ್ದಾರೆ. ಶೇ. ೧೭.೯೯ಎ ಗ್ರೇಡ್ ಶೇ. ೮೦ ರಿಂದ೯೦ ರಷ್ಟು ಅಂಕ ಪಡೆದಿದ್ದು, ಬಿ ಪ್ಲಸ್ ಗ್ರೇಡ್ ಅಂದರೆ ಶೇ. ೭೧ ರಿಂದ ೭೯ ರಷ್ಟು ಅಂಕಗಳನ್ನು ಶೇ. ೧೯.೪೫ ವಿದ್ಯಾರ್ಥಿಗಳು ಪಡೆದಿದ್ದಾರೆ.
ಬಿ. ಗ್ರೆಡ್ ಶೇ. ೬೦ ರಿಂದ ೬೧ ರಷ್ಟು ಅಂಕವಗನ್ನು ಶೇ. ೧೯.೬೮ ವಿದ್ಯಾರ್ಥಿಗಳು ಪಡೆದಿದ್ದು, ಸಿ ಪ್ಲಸ್ ಗ್ರೇಡ್ ಶೇ. ೫೦ ರಿಂದ ೫೯ ರಷ್ಟು ಅಂಕವನ್ನು ೧೭,೭೬ ವಿದ್ಯಾರ್ಥಿಗಳು ಸಿ. ಗ್ರೇಡ್ ಶೇ. ೩೩ ರಿಂದ ೪೯ ರಷ್ಟು ಅಂಕವನ್ನು ಶೇ. ೧೫.೭೧ ರಷ್ಟು ವಿದ್ಯಾರ್ಥಿಗಳು ಪಡೆದಿದ್ದಾರೆ.


ಈ ವರ್ಷ ಒಟ್ಟಾರೆ. ಶೇ. ೬೬,೫ ರಷ್ಟು ವಿದ್ಯಾರ್ಥಿಗಳು ಶೇ. ೬೦ ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ -೧ನ್ನು ದಿನಾಂಕ ೧೮-೩-೨೦೨೬ ರಿಂದ ೨-೪-೨೦೨೬ ರವರೆಗೆ ಒಟ್ಟು ೨೮೭೦ ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಗಿತ್ತು


ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ೮-೪- ೨೦೨೬ ರಿಂದ ೧೬-೪-೨೦೨೬ ರವರೆಗೆ ೩೫ ಶೈಕ್ಷಣಿಕ ಜಿಲ್ಲೆಗಳ ೨೩೭ ಮೌಲ್ಯ ಮಾಪನ ಕೇಂದ್ರಗಳಲ್ಲಿ ಮೌಲ್ಯ ಮಾಪನ ನಡೆಸಲಾಗಿತ್ತು.


ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆಪ್ ಮೂಲಕ ರವಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು


ಶಾಲೆಗಳಲ್ಲೂ ಫಲಿತಾಂಶವನ್ನು ಇಂದು ಮಧ್ಯಾಹ್ನವೇ ಪ್ರಕಟಿಸಲಾಗಿದೆ.

೭ ವಿದ್ಯಾರ್ಥಿಗಳಿಗೆ ೬೨೫ಕ್ಕೆ ೬೨೫ ಅಂಕ


ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೭ ವಿದ್ಯಾರ್ಥಿಗಳು ೬೨೫ ಕ್ಕೆ ೬೨೫ ಅಂಕ ಪಡೆದು ಪ್ರಥಮ ರ್‍ಯಾಂಕ್ ಹಂಚಿಕೊಂಡಿದ್ದಾರೆ.


ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲ್ಲೂಕಿನ ಕಟಗೇರಿ ಸರ್ಕಾರಿ ಪ್ರೌಢಶಾಲೆಯ ಪ್ರಾರ್ಥನ ನಾಗಪ್ಪ ಬಿರಾದಾರ್ ಪಾಟೀಲ್, ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ಕಬ್ಬಾಳದ ವಿಜಯಲಕ್ಷ್ಮಿ ಆಂಗ್ಲ ಮಾಧ್ಯಮಶಾಲೆಯ ಭರತ್ ಜಿ., ಚಿಕ್ಕಮಗಳೂರು ತಾಲ್ಲೂಕಿನ ಸೆಂಟ್ ಮೇರಿಸ್ ಪ್ರೌಢಶಾಲೆಯ ಬೃಂದಾ ಎಂ. ಪಕ್ಷೆ, ಬೆಂಗಳೂರು ಉತ್ತರದ ಪೂರ್ಣಪ್ರಜ್ಞಾ ಶಾಲೆಯ ಧನುಷ್ ಸುದೀರ್ ಮೈಸೂರು, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮದರ್ ಥೆರೆಸಾ ಶಾಲೆಯ ಪ್ರೀತಂ ಜಿ. ಪೂಜಾರಿ, ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ನಾಗರಗಟ್ಟದ ಆಕ್ಸ್‌ಫರ್ಡ್ ಆಂಗ್ಲ ಭಾಷೆಯ ಸೌಜನ್ಯ ಬಸವರಾಜು ಕಂದಪೂರ್, ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬಿವಿಆರ್ ಇಂಗ್ಲೀಷ್ ಮಾಧ್ಯಮ ಶಾಲೆಯ ಸುಖ್‌ದೇವ್ ಈ ೭ ವಿದ್ಯಾರ್ಥಿಗಳು ಪ್ರಥಮ ರ್‍ಯಾಂಕನ್ನು ಹಂಚಿಕೊಂಡಿದ್ದಾರೆ.
ಕಳೆದ ವರ್ಷ ೨೨ ವಿದ್ಯಾರ್ಥಿಗಳು ಪ್ರಥಮ ರ್‍ಯಾಂಕ್ ಹಂಚಿಕೊಂಡಿದ್ದರು.


೬೨೫ ಕ್ಕೆ ೬೨೫ ಅಂಕ ಪಡೆದ ೭ ವಿದ್ಯಾರ್ಥಿಗಳು, ೨ನೇ ರ್‍ಯಾಂಕ್ ೫೨೩ ಅಂಕ ಪಡೆದು ೨೮ ವಿದ್ಯಾರ್ಥಿಗಳು ಮೂರನೇ ರ್‍ಯಾಂಕ್ ೬೨೨ ಅಂಕ ಪಡೆದು ನಾಲ್ಕನೇ ರ್‍ಯಾಂಕ್‌ನ್ನು ೭೪ ವಿದ್ಯಾರ್ಥಿಗಳು, ೬೨೧ ಅಂಕ ಪಡೆದು ಐದನೇ ರ್‍ಯಾಂಕ್‌ನ್ನು ೯೮ ವಿದ್ಯಾರ್ಥಿಗಳು ಹಂಚಿಕೊಂಡಿದ್ದು, ೬೨೫ ಕ್ಕೆ ೬೨೦ ಅಂಕ ಪಡೆದು ೧೫೦ ವಿದ್ಯಾರ್ಥಿಗಳು ಆರನೇ ರ್‍ಯಾಂಕ್ ಹಂಚಿಕೊಂಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಜಿಲ್ಲಾವಾರು ಫಲಿತಾಂಶ
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದು, ಕಲಬುರಗಿ ಕೊನೆಯ ಸ್ಥಾನದಲ್ಲಿದೆ.
ಶೈಕ್ಷಣಿಕ ಜಿಲ್ಲೆಯ ಜಿಲ್ಲಾವಾರು ರ್ಯಾಂಕ್ ಪಟ್ಟಿ ಈ ರೀತಿ ಇದೆ.
೧ ದಕ್ಷಿಣ ಕನ್ನಡ ಶೇ. ೯೮.೪೦
೨, ಉಡುಪಿ – ಶೇ.೯೮.೧೮
೩. ಉತ್ತರ ಕನ್ನಡ-ಶೇ. ೯೮.೦೯
೪ ಹಾಸನ- ಶೇ. ೯೭.೫೧
೫. ಮಂಡ್ಯ- ಶೇ.೯೭.೪೫
೬ ಶಿರಸಿ-ಶೇ. ೯೭.೨೧
೭, ಹಾವೇರಿ- ಶೇ.೯೬.೮೭
೮. ಕೊಡಗು- ಶೇ. ೯೬.೭೦
೯. ಶಿವಮೊಗ್ಗ-ಶೇ.೯೬.೫೬
೧೦. ವಿಜಯನಗರ- ಶೇ.೯೬.೩೯
೧೧. ಬೆಂಗಳೂರು ಗ್ರಾಮಾಂತರ- ಶೇ.೯೫.೮೪
೧೨ ಧಾರವಾಡ-ಶೇ. ೯೮.೫೯
೧೩. ಕೋಲಾರ- ಶೇ.೯೫.೫೦
೧೪, ಬಾಗಲಕೋಟೆ- ಶೇ.೯೫.೪೨
೧೫. ಬೆಂಗಳೂರು ಉತ್ತರ- ಶೇ.೯೫.೩೪
೧೬. ಗದಗ- ಶೇ. ೯೫.೨೪
೧೭. ಚಿಕ್ಕಮಗಳೂರು- ಶೇ. ೯೪.೯೯
೧೮. ಬೆಳಗಾವಿ- ಶೇ. ೯೪.೭೫
೧೯. ದಾವಣಗೆರೆ- ಶೇ. ೯೪.೬೪
೨೦. ಮೈಸೂರು- ಶೇ. ೯೪.೫೦
೨೧. ರಾಯಚೂರು- ಶೇ.೯೪.೪೧
೨೨. ವಿಜಯಪುರ- ಶೇ. ೯೪.೧೭
೨೩. ಚಿಕ್ಕೋಡಿ- ಶೇ.೯೪.೦೯
೨೪. ಬಳ್ಳಾರಿ- ಶೇ. ೯೩.೩೬
೨೫. ಕೊಪ್ಪಳ- ಶೇ. ೯೩.೧೦
೨೬. ರಾಮನಗರ-ಶೇ.೯೨.೮೩
೨೭. ಚಿತ್ರದುರ್ಗ- ಶೇ.೯೨.೨೫
೨೮. ಬೀದರ್- ಶೇ.೯೨.೧೮
೨೯. ತುಮಕೂರು- ಶೇ. ೯೨.೦೪
೩೦. ಚಾಮರಾಜನಗರ-ಶೇ. ೯೧.೮೯
೩೧. ಯಾದಗಿರಿ- ಶೇ. ೯೧.೮೯
೩೨. ಬೆಂಗಳೂರು ದಕ್ಷಿಣ -ಶೇ. ೯೧.೬೫
೩೩. ಚಿಕ್ಕಬಳ್ಳಾಪುರ-ಶೇ.೯೦.೮೮
೩೪. ಮಧುಗಿರಿ-ಶೇ.೯೦.೨೬
೩೫. ಕಲಬುರುಗಿ- ಶೇ.೮೫.೦೬