
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.24: ಇಂದು ಎಸ್. ಯು. ಸಿ. ಐ (ಕಮ್ಯುನಿಸ್ಟ್ ) ಪಕ್ಷದ 78ನೇ ಸಂಸ್ಥಾಪನಾ ವರ್ಷಾಚರಣೆ ಸಂದರ್ಭದಲ್ಲಿ ಪಕ್ಷದ ಕಛೇರಿಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಮುನ್ನ ಪಕ್ಷದ ಸಂಸ್ಥಾಪಕರು, ಮಹಾನ್ ಮಾರ್ಕ್ಸ್ ವಾದಿ ಚಿಂತಕರಾದ ಕಾ. ಶಿವದಾಸ್ ಘೋಷ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಎಸ್. ಯು. ಸಿ. ಐ (ಕಮ್ಯುನಿಸ್ಟ್ ) ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾ. ಬಿ. ರವಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ” ಇಂದು ಜಗತ್ತಿನಾದ್ಯಂತ ಬಂಡವಳಶಾಹಿ ವ್ಯವಸ್ಥೆ ತೀವ್ರತರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಬಿಕ್ಕಟ್ಟಿನಿಂದ ಹೊರ ಬರಲು ಶಸ್ತ್ರಾಸ್ತ್ರ ವ್ಯಾಪಾರವನ್ನು ಉತ್ತೇಜಿಸುತ್ತಾ, ಯುದ್ಧಗಳನ್ನು ಸೃಷ್ಟಿಸುತ್ತಿದೆ. ಕಾರ್ಪೊರೇಟ್ ಕಂಪನಿಗಳ ಲಾಭ ದಾಹಕ್ಕಾಗಿ ದೇಶಗಳ ಸಾರ್ವಭೌಮತೆಯನ್ನೇ ಹೊಸಕಿ ಹಾಕಲಾಗುತ್ತಿದೆ. ಇರಾನ್ ಮೇಲೆ ಅಮೇರಿಕಾ ನಡೆಸಿದ ಯುದ್ಧ ದಾಳಿ, ಪ್ಯಾಲೇಸ್ತೇನ್ ನಲ್ಲಿ ಇಸ್ರೇಲ್ ನಡೆಸಿರುವ ನರಮೇಧ ನಮ್ಮ ಕಣ್ಣ ಮುಂದಿನ ಉದಾಹರಣೆಗಳಾಗಿವೆ. ಇಂದು ಜಗತ್ತಿನಾದ್ಯಂತ ಶಾಂತಿ ನೆಲಸಬೇಕಾದರೆ, ದುಡಿಯುವ ಜನರ ಶೋಷಣೆಗೆ ಅಂತ್ಯ ಹಾಡಬೇಕಾದರೆ, ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಕೊನೆಗಾಣಿಸಬೇಕು. ಕಾರ್ಮಿಕ ವರ್ಗದ ಕ್ರಾಂತಿಯನ್ನು ನೆರವೇರಿಸಿ, ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಇಂತಹ ಕ್ರಾಂತಿಯನ್ನು ಸಾಕಾರಗೊಳಿಸಲು ಎಸ್. ಯು. ಸಿ. ಐ (ಸಿ) ಪಕ್ಷವನ್ನು, ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾ. ಶಿವದಾಸ್ ಘೋಷ್ ಅವರು ಕಟ್ಟಿ ಬೆಳೆಸಿದ್ದಾರೆ. ಹಾಗಾಗಿ ಈ ಪಕ್ಷವನ್ನು ಬಲಪಡಿಸಲು, ಶೋಷಿತ ಜನರ ಹೋರಾಟ ತೀವ್ರಗೊಳಿಸಲು ಮುಂಬರಬೇಕು” ಎಂದರು.
ಜಿಲ್ಲಾ ಕಾರ್ಯದರ್ಶಿ ಕಾ. ರಾಧಾಕೃಷ್ಣ ಉಪಾಧ್ಯಕ್ಷ ಅವರು ಭಾಷಣಕಾರರಾಗಿ ಆಗಮಿಸಿದ್ದರು.
ಅಧ್ಯಕ್ಷತೆಯನ್ನು ಜಿಲ್ಲಾ ಸೆಕ್ರಟೇರಿಯೇಟ್ ಸದಸ್ಯರಾದ ಕಾ. ಮಂಜುಳಾ ಅವರು ವಹಿಸಿದ್ದರು.
ಜಿಲ್ಲಾ ಸಮಿತಿ ಸದಸ್ಯರಾದ ಕಾ. ದೇವದಾಸ್, ಕಾ. ನಾಗಲಕ್ಷ್ಮಿ, ಡಾ.ಪ್ರಮೋದ್, ಕಾ. ಸೋಮಶೇಖರ ಗೌಡ, ಕಾ. ಶಾಂತಾ, ಕಾ. ಗೋವಿಂದ್, ಕಾ. ಈಶ್ವರಿ ಉಪಸ್ಥಿತರಿದ್ದರು. ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಭಾಗವಹಿಸಿದ್ದರು.






















