
ಬಂದರುಗಳ ಮೇಲೆ ದಿಗ್ಬಂಧನ ಮುಂದುವರಿಕೆ
ವಾಷಿಂಗ್ಡನ್,ಏ.೨೨- ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಇರಾನ್ ಜೊತೆಗಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಮಸ್ಯೆ ಬಗೆಹರಿಯುವ ತನಕ ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾತುಕತೆಯ ಸಂಧಾನಕ್ಕೆ ಒಪ್ಪಿಗೆ ನೀಡದಿದ್ದರೆ ಇರಾನ್ ಸರ್ವನಾಶ ಮಾಡುವುದಾಗಿ ಗುಡುಗಿದ್ದ ಟ್ರಂಪ್, ಕದನ ವಿರಾಮ ಅಂತ್ಯಗೊಳ್ಳಲು ಕೆಲಗಂಟೆಗಳು ಬಾಕಿಯಿರುವ ಹೊತ್ತಲ್ಲೇ ಇರಾನ್‌ನೊಂದಿಗಿನ ಅನಿರ್ದಿಷ್ಟಾವಧಿ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ಯುದ್ಧವನ್ನು ಕೊನೆಗೊಳಿಸಲು ಇರಾನಿನ ನಾಯಕರು ’ಏಕೀಕೃತ ಪ್ರಸ್ತಾವನೆಯೊಂದಿಗೆ ಬರುವವರೆಗೆ’ ಇರಾನ್ ಮೇಲಿನ ದಾಳಿ ತಡೆಹಿಡಿಯಲಾಗುವುದು, ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕ್ ಮನವಿಯನ್ನು ಒಪ್ಪಿಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಪಾಕಿಸ್ತಾನದ ಕೋರಿಕೆಯ ಮೇರೆಗೆ ಇರಾನ್ ನೊಂದಿಗೆ ಇಂದು ಮುಕ್ತಾಯವಾಗಿದ್ದ ಎರಡು ವಾರಗಳ ಕದನ ವಿರಾಮವನ್ನು ಮುಂದಿನ ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಯುದ್ಧವನ್ನು ಕೊನೆಗೊಳಿಸಲು ಇರಾನ್ ಪ್ರಸ್ತಾವನೆಯನ್ನು ಮುಂದಿಡಲು ಹೆಚ್ಚಿನ ಸಮಯವನ್ನು ನೀಡಲು ಅಮೆರಿಕ ಮಿಲಿಟರಿ ತನ್ನ ಯೋಜಿತ ದಾಳಿ ನಿಲ್ಲಿಸಲಿದೆ. ಕ್ರಮವು ಪಾಕಿಸ್ತಾನಿ ಮಧ್ಯವರ್ತಿಗಳ ಕೋರಿಕೆಯ ಮೇರೆಗೆ ಬಂದಿದೆ ಎಂದು ತಿಳಿಸಿದ್ದಾರೆ.
ಮಿಲಿಟರಿಗೆ ದಿಗ್ಬಂಧನ ಮುಂದುವರಿಸಲು ಮತ್ತು ಇತರ ಎಲ್ಲಾ ವಿಷಯಗಳಲ್ಲಿ, ಸಿದ್ಧರಾಗಿ ಮತ್ತು ಸಮರ್ಥರಾಗಿರಲು ಸೂಚಿಸಲಾಗಿದೆ. ಇರಾನ್ ಶಾಂತಿ ಮಾತುಕತೆಯ ಪೂರ್ಣ ಪ್ರಸ್ತಾವನೆಯನ್ನು ಸಲ್ಲಿಸುವವರೆಗೆ ಮತ್ತು ಚರ್ಚೆಗಳು ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಮುಕ್ತಾಯಗೊಳ್ಳುವವರೆಗೆ ಕದನ ವಿರಾಮ ಜಾರಿಯಲ್ಲಿರಲಿದೆ ಎಂದಿದ್ದಾರೆ.
ನಿರ್ದಿಷ್ಟ ಗಡುವು ಇಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಿಂದ ಅಮೆರಿಕ ಕಡೆಯಿಂದ ಕದನ ವಿರಾಮ ವಿಸ್ತರಣೆ ಮುಕ್ತವಾಗಿದೆ ಎನ್ನುವುದನ್ನು ಸೂಚಿಸಿದೆ
ಇರಾನ್‌ನಿಂದ ಪ್ರತಿಕ್ರಿಯೆ ಇಲ್ಲ
ಕದನ ವಿರಾಮ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಸಂಬಂಧ ಇರಾನ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕದನ ವಿರಾಮ ವಿಸ್ತರಣೆಯಿಂದ ಅಮೆರಿಕ-ಇರಾನ್ ನಡುವಿನ ಕದನ ವಿರಾಮ ಸದ್ಯಕ್ಕೆ ನಿಂತಿದೆ. ಇದರಿಂದ ಸಂಘರ್ಷ ನಡೆಯುವುದು ಕೊನೆಯಾಗಿದೆ ಎಂದು ಹೇಳಲಾಗಿದೆ.
ಇರಾನಿನ ಅಧಿಕಾರಿಗಳು ದೇಶದ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನ ಖಂಡಿಸಿ, ನಿಗದಿಯಾಗಿದ್ದ ಮಾತುಕತೆಗಳಲ್ಲಿ ಅವರ ಭಾಗವಹಿಸುವಿಕೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಮೆರಿಕ ಈ ನಿರ್ಧಾರ ಕೈಗೊಂಡಿದೆ.
ಟ್ರಂಪ್‌ಗೆ ಪಾಕಿಸ್ತಾನ ಕೃತಜ್ಞತೆ
ಇರಾನ್ ಜೊತೆಗೆ ಕದನ ವಿರಾಮ ವಿಸ್ತರಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೃತಜ್ಞತೆ ಸಲ್ಲಿಸಿದ್ದಾರೆ.
ಇಸ್ಲಾಮಾಬಾದ್ ಸಂಘರ್ಷಕ್ಕೆ ಮಾತುಕತೆಯ ಮೂಲಕ ಇತ್ಯರ್ಥಕ್ಕೆ ಒತ್ತಾಯಿಸುವುದನ್ನು ಮುಂದುವರಿಸುತ್ತದೆ.
“ಸಂಘರ್ಷಕ್ಕೆ ಶಾಶ್ವತ ಅಂತ್ಯ ಹಾಡಲು ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿರುವ ಎರಡನೇ ಸುತ್ತಿನ ಮಾತುಕತೆಯ ಸಮಯದಲ್ಲಿ ಎರಡೂ ಕಡೆಯವರು ಕದನ ವಿರಾಮ ಪಾಲಿಸುವುದನ್ನು ಮುಂದುವರಿಯಲಿದೆ ಸಮಗ್ರ ‘ಶಾಂತಿ ಒಪ್ಪಂದ’ ಮುಂದುವರಿಯಲಿದೆ ಎಂದಿದ್ದಾರೆ.

























