Home ಜಿಲ್ಲೆ ಬೆಂಗಳೂರು ೬೨ನೇ ಫೋನ್-ಇನ್‌ನಲ್ಲಿ ೪೨ ಅಹವಾಲು ಸ್ವೀಕಾರ; ರಸ್ತೆ ಗುಂಡಿ, ಘನತ್ಯಾಜ್ಯ ಸಮಸ್ಯೆಗಳೇ ಹೆಚ್ಚು

೬೨ನೇ ಫೋನ್-ಇನ್‌ನಲ್ಲಿ ೪೨ ಅಹವಾಲು ಸ್ವೀಕಾರ; ರಸ್ತೆ ಗುಂಡಿ, ಘನತ್ಯಾಜ್ಯ ಸಮಸ್ಯೆಗಳೇ ಹೆಚ್ಚು

ಬೆಂಗಳೂರು, ನ.೨೮: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರ ೬೨ನೇ ಫೋನ್-ಇನ್ ಕಾರ್ಯಕ್ರಮದಲ್ಲಿ ೩೯ ಕರೆಗಳ ಮೂಲಕ ಒಟ್ಟು ೪೨ ಅಹವಾಲುಗಳು ಸ್ವೀಕೃತವಾಗಿವೆ. ರಸ್ತೆ ಗುಂಡಿಗಳು, ಘನತ್ಯಾಜ್ಯ ನಿರ್ವಹಣೆ, ಇ-ಖಾತಾ ಸೇವೆ, ಅರಣ್ಯ ಇಲಾಖೆ ಹಾಗೂ ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿವೆ.


ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರತಿ ಶುಕ್ರವಾರ ಆಯೋಜಿಸಲಾಗುವ ಫೋನ್-ಇನ್ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಅಹವಾಲುಗಳನ್ನು ‘ಸಹಾಯ ೨.೦’ ತಂತ್ರಾಂಶದಲ್ಲಿ ದಾಖಲಿಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ವಹಿಸಲಾಗಿದೆ. ಸಮಸ್ಯೆಗಳನ್ನು ಸ್ಥಳ ಪರಿಶೀಲನೆ ನಡೆಸಿ ತ್ವರಿತವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.


ಇಂದಿನ ಕಾರ್ಯಕ್ರಮದಲ್ಲಿ ಇ-ಖಾತಾ ಮತ್ತು ಖಾತಾ ಸೇವೆಗಳಿಗೆ ಸಂಬಂಧಿಸಿದಂತೆ ೭, ವಿದ್ಯುತ್ ವಿಭಾಗದಲ್ಲಿ ೩, ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ೪, ಉದ್ಯಾನವನ ಮತ್ತು ಆಟದ ಮೈದಾನಗಳ ಕುರಿತು ೩, ಪಾದಚಾರಿ ಮಾರ್ಗಗಳ ಸಮಸ್ಯೆಗಳ ಕುರಿತು ೨ ಹಾಗೂ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ೬ ಅಹವಾಲುಗಳು ಬಂದಿವೆ.


ಇದಲ್ಲದೆ, ಅನಧಿಕೃತ ಕಟ್ಟಡಗಳ ಕುರಿತು ೪, ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ೭, ಪಾದಚಾರಿ ಮಾರ್ಗಗಳ ಒತ್ತುವರಿ, ರಸ್ತೆ ಕಟಿಂಗ್, ರಸ್ತೆ ಬದಿಯ ಚರಂಡಿ, ಮಳೆನೀರು ಚರಂಡಿ, ನಿರ್ಮಾಣ ತ್ಯಾಜ್ಯ ತೆರವು ಮತ್ತು ಪಶುವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿದಂತೆ ತಲಾ ಒಂದು ಅಹವಾಲು ಸ್ವೀಕರಿಸಲಾಗಿದೆ.


ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು, ಕಸ ಸಂಗ್ರಹಣಾ ವಾಹನಗಳು ಸರಿಯಾಗಿ ಬಾರದಿರುವುದು, ಉದ್ಯಾನವನಗಳ ನಿರ್ವಹಣೆ, ಬೀದಿ ದೀಪಗಳ ದೋಷ, ಮರದ ಕೊಂಬೆ ಹಾಗೂ ಒಣಗಿದ ಮರಗಳ ತೆರವು ಸೇರಿದಂತೆ ಹಲವು ಸಮಸ್ಯೆಗಳು ಪಾಲಿಕೆಯ ಗಮನಕ್ಕೆ ಬಂದಿವೆ.


ಫೋನ್-ಇನ್ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೃತ ಶಾಲೆಯ ಬಳಿ ಕ್ರೇನ್‌ನಿಂದ ಬಿಎಸ್‌ಎನ್‌ಎಲ್ ಕೇಬಲ್ ಹಾನಿಗೊಳಗಾದ ಪರಿಣಾಮ ನಿಯಂತ್ರಣ ಕೊಠಡಿಯ ಒಂದು ದೂರವಾಣಿ ಸಂಪರ್ಕ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸುವಲ್ಲಿ ಅಡಚಣೆ ಉಂಟಾಗಿರುವ ಸಾಧ್ಯತೆಯಿದೆ. ಸಂಪರ್ಕವನ್ನು ಮರುಸ್ಥಾಪಿಸಲು ಬಿಎಸ್‌ಎನ್‌ಎಲ್ ಸಿಬ್ಬಂದಿ ಕ್ರಮ ಕೈಗೊಂಡಿದ್ದು, ಪಾಲಿಕೆಯ ಇತರೆ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಸಂಪರ್ಕಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ಪಾಲಿಕೆ ತಿಳಿಸಿದೆ.


‘ಸಹಾಯ ೨.೦’ ತಂತ್ರಾಂಶದ ವರದಿ ಪ್ರಕಾರ, ೨೦೨೩ರ ಜನವರಿ ೧ರಿಂದ ೨೦೨೫ರ ಆಗಸ್ಟ್ ೩೧ರವರೆಗೆ ೧,೧೭,೧೭೫ ಅಹವಾಲುಗಳು ಸ್ವೀಕೃತವಾಗಿದ್ದವು. ಈ ಅವಧಿಯಲ್ಲಿ ೨,೧೯೩ ಅಹವಾಲುಗಳು ಬಾಕಿ ಉಳಿದಿದ್ದವು. ಜಿಬಿಎ ರಚನೆಯ ನಂತರ ೨೦೨೫ರ ಸೆಪ್ಟೆಂಬರ್ ೧ರಿಂದ ೨೦೨೬ರ ನವೆಂಬರ್ ೨೬ರವರೆಗೆ ೯೨,೯೫೦ ಅಹವಾಲುಗಳು ಸ್ವೀಕೃತವಾಗಿದ್ದು, ಈ ಪೈಕಿ ೧,೨೭೫ ಅಹವಾಲುಗಳು ಬಾಕಿ ಉಳಿದಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಒಟ್ಟಾರೆ ೨,೧೦,೮೨೮ ಅಹವಾಲುಗಳು ದಾಖಲಾಗಿದ್ದು, ೨,೦೯,೫೫೩ ಅಹವಾಲುಗಳು ಇತ್ಯರ್ಥಗೊಂಡಿವೆ. ಪ್ರಸ್ತುತ ೧,೩೧೭ ಅಹವಾಲುಗಳು ಬಾಕಿ ಉಳಿದಿವೆ ಎಂದು ಪಾಲಿಕೆ ತಿಳಿಸಿದರು.ಪ್ರತಿ ಶುಕ್ರವಾರ ನಡೆಯುವ ಆಯುಕ್ತರ ಫೋನ್-ಇನ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.