
ಕಲಬುರಗಿ,ಸೆ.30: ಸೇವಾ ನ್ಯೂನತೆ ಎಸಗಿದ ಕೆಕೆಆರ್‍ಟಿಸಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 33 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಬೀದರಿನ ವಿದ್ಯಾರ್ಥಿನಿ ತೇಜಸ್ವಿನಿ ಬಸವರಾಜ ಎಂಬುವವರು 2025ರ ನವೆಂಬರ್ 16ರಂದು ಬೀದರ್‍ನಿಂದ ದಾವಣಗೆರೆಗೆ ಹೋಗಲು ಕೆಕೆಆರ್‍ಟಿಸಿ ಸ್ಲೀಪರ್ ಕೋಚ್ ಬಸ್‍ಗೆ ಸೀಟು ಕಾಯ್ದಿರಿಸಿದ್ದರು. ಆ ಬಸ್ ಸಂಜೆ 6 ಗಂಟೆಗೆ ಬೀದರಿನಿಂದ ಪ್ರಯಾಣ ಆರಂಭಿಸಿ ಮರುದಿನ ಬೆಳಿಗ್ಗೆ 6 ಗಂಟೆಗೆ ದಾವಣಗೆರೆ ತಲುಪಬೇಕಿತ್ತು.
ಆದರೆ, ಸಂಜೆ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಿದ್ದ ಬಸ್ ಹುಮನಾಬಾದ್ ಸಮೀಪ ದಾರಿ ಮಧ್ಯದಲ್ಲಿ ಕೆಟ್ಟಿತ್ತು. ಬಳಿಕ ಅದನ್ನು ಕಲಬುರಗಿಯ ಡಿಪೆÇಕ್ಕೆ ತಂದು ದುರಸ್ತಿಗೂ ಪ್ರಯತ್ನಿಸಲಾಯಿತು. ಆದರೂ, ದುರಸ್ತಿಯಾಗಿರಲಿಲ್ಲ. “ಬೆಳಿಗ್ಗೆ ನನಗೆ ಪರೀಕ್ಷೆಯಿದ್ದು, ಬದಲಿ ವ್ಯವಸ್ಥೆ ಮಾಡಿ” ಎಂದು ತೇಜಸ್ವಿನಿ ಕೋರಿದ್ದರು. ಅದಕ್ಕೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ನಂತರ ತೇಜಸ್ವಿನಿ ಕಲಬುರಗಿಯಿಂದ ಕಾರು ಬಾಡಿಗೆ ಪಡೆದು ದಾವಣಗೆರೆ ತಲುಪಿದ್ದರು. ಅದಕ್ಕೆ ಬಾಡಿಗೆ ರೂಪದಲ್ಲಿ 18,700 ರೂ ಹಣ ಪಾವತಿಸಿದ್ದರು.
ಕಾರಿಗೆ ಪಾವತಿಸಿದ ಬಾಡಿಗೆ, ಟಿಕೆಟ್ ಮೊತ್ತ ಹಾಗೂ ಮಾನಸಿಕ ಹಿಂಸೆಗೆ ಪರಿಹಾರ ಕೊಡಿಸುವಂತೆ ಕೋರಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕದ ತಟ್ಟಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಮಾಲತಿ ಗುರಣ್ಣ ಹಾಗೂ ಸದಸ್ಯರಾದ ಎಂ. ಲೋಕೇಶ ಅವರಿದ್ದ ಪೀಠವು ಅರ್ಜಿದಾರರಿಗೆ 18,700 ರೂ. ಅನ್ನು 2026ರ ಜನವರಿ 3ರಿಂದ ಹಣಪಾವತಿಸುವ ದಿನಾಂಕದ ತನಕ ಶೇ 6 ರ ಬಡ್ಡಿಯೊಂದಿಗೆ ನೀಡಬೇಕು. ಮಾನಸಿಕ ಹಿಂಸೆ, ಸೇವಾ ನ್ಯೂನತೆಗೆ 10 ಸಾವಿರ ರೂ.ಹಾಗೂ ದೂರಿನ ವೆಚ್ಚವಾಗಿ 5 ಸಾವಿರ ರೂ.ಪಾವತಿಸುವಂತೆ ಕೆಕೆಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬೆಂಗಳೂರಿನ ಸಾರಿಗೆ ನಿಗಮದ ಸೇವಾ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದ್ದಾರೆ. ಅರ್ಜಿದಾರರ ಪರವಾಗಿ ಶಂಭುಲಿಂಗ ಸಾಲಿಮಠ ಅವರು ವಾದ ಮಂಡಿಸಿದ್ದರು.





















