78ನೇ ಚಾರ್ಟರ್ಡ್ ಅಕೌಂಟೆಂಟ್ಸ್ (ಸಿಎ) ದಿನಾಚರಣೆಯ ಅಂಗವಾಗಿ ವಸಂತನಗರದ ಐಸಿಎಐ ಭವನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬೆಂಗಳೂರು ಶಾಖೆಯ ಅಧ್ಯಕ್ಷೆ ಸಿಎ ಕವಿತಾ ಪರಮೇಶ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳು, ಸದಸ್ಯರು ಹಾಗೂ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ಸಿಎ ಕೋರ್ಸ್ ಕಬ್ಬಿಣದ ಕಡಲೆಯಲ್ಲ; ದೃಢ ಸಂಕಲ್ಪ, ನಿರಂತರ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನ ಇದ್ದರೆ ಯಶಸ್ಸು ಸಾಧಿಸಬಹುದು” ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಸದಸ್ಯರಿಂದ ಭಾರೀ ಸ್ಪಂದನೆ ದೊರೆತಿದ್ದು, ಸಭಾಂಗಣ ಸಂಪೂರ್ಣವಾಗಿ ಭರ್ತಿಯಾಗಿತ್ತು.
































