Home ಸಿನೆಮಾ ಸದ್ದು ನಿಂತಾಗ ಉಳಿಯುವುದೇನು ಉತ್ತರ ಹೇಳುವ ‘MAGICC’

ಸದ್ದು ನಿಂತಾಗ ಉಳಿಯುವುದೇನು ಉತ್ತರ ಹೇಳುವ ‘MAGICC’

ಶಬ್ದದ ಜಗತ್ತಿನಿಂದ ಮೌನದ ಒಳನೋಟದತ್ತ ಕರೆದೊಯ್ಯುವ ‘MAGICC’ (ಮ್ಯಾಜಿಕ್) ಕಿರುಚಿತ್ರ ಇದೀಗ ಪ್ರೇಕ್ಷಕರ ವೀಕ್ಷಣೆಗೆ ಲಭ್ಯವಾಗಿದೆ. ರಿಷಬ್ ಶೆಟ್ಟಿ ಪ್ರಸ್ತುತಪಡಿಸಿರುವ ಈ ಬಹುಭಾಷಾ ಕಿರುಚಿತ್ರವನ್ನು ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.

ನವನಿರ್ದೇಶಕ ಶಿವಚಿರಂತನ ನಿರ್ದೇಶನದ ‘MAGICC’ ಮೂಲಕ ಆದಿತ್ಯ ಬಿ. ಪೂಜಾರ್ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಐದು ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ, ಶಬ್ದದ ಆಚೆಗಿನ ಭಾವನೆಗಳು ಹಾಗೂ ಆತ್ಮಾವಲೋಕನವನ್ನು ಕೇಂದ್ರವಾಗಿಸಿಕೊಂಡಿದೆ. “ಸುತ್ತಲಿನ ಸದ್ದು ಅಡಗಿದಾಗ, ಉಳಿಯುವುದೇನು?” ಎಂಬ ಪ್ರಶ್ನೆಯೇ ಚಿತ್ರದ ಕಥೆಯ ಪ್ರಮುಖ ತಿರುಳು.

ಖ್ಯಾತ ಬರಹಗಾರ ಜೋಗಿ (ಗಿರೀಶ್ ರಾವ್ ಹತ್ವಾರ್) ಕಥೆ ಬರೆದಿದ್ದು, ರಿಷಬ್ ಶೆಟ್ಟಿ, ವಿ. ರವಿ ಕುಮಾರ್, ಆದಿತ್ಯ ಬಿ. ಪೂಜಾರ್ ಹಾಗೂ ಶಿವಚಿರಂತನ ನಿರ್ಮಾಪಕರಾಗಿದ್ದಾರೆ. ಮನ್ಪ್ರಸಾದ್ ಕ್ರಿಯೇಷನ್ಸ್ ಮತ್ತು ಷಟ್ಟರ್ ಸ್ಪೇಸ್ ಸಹ-ನಿರ್ಮಾಣದಲ್ಲಿ ಕೈಜೋಡಿಸಿವೆ.

ಭುವನ್ ರೆಡ್ಡಿ ಛಾಯಾಗ್ರಹಣ, ನಚಿಕೇತ್ ಶರ್ಮಾ ಸಂಗೀತ, ಗೌತಮ್ ಸರಟೂರ್ ಸಂಕಲನ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಎಂ.ಆರ್. ರಾಜಕೃಷ್ಣನ್ ಧ್ವನಿ ವಿನ್ಯಾಸ ಚಿತ್ರಕ್ಕಿದೆ. ರಮೇಶ್ ಸಿ.ಪಿ. ವರ್ಣವಿನ್ಯಾಸ, ಧರಣಿ ಗಂಗೆಪುತ್ರ ಕಲಾ ನಿರ್ದೇಶನ ಹಾಗೂ ರೋಹಿತ್ ಚಿಕ್ಕಮಗಳೂರು ಪೋಸ್ಟ್ ಪ್ರೊಡಕ್ಷನ್ ಮೇಲ್ವಿಚಾರಣೆ ನಿರ್ವಹಿಸಿದ್ದಾರೆ. ಅನೀಶ್ ಶರ್ಮಾ ಮತ್ತು ಪಟಾ ಪೋಸ್ಟರ್ಸ್ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.

ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮಲ್ಟಿ-ಆಡಿಯೋ ರೂಪದಲ್ಲಿ ಬಿಡುಗಡೆಯಾಗಿರುವ ‘MAGICC’, ಹೊಸ ಪ್ರತಿಭೆಗಳಿಗೆ ರಿಷಬ್ ಶೆಟ್ಟಿ ನೀಡುತ್ತಿರುವ ಪ್ರೋತ್ಸಾಹದ ಮತ್ತೊಂದು ಹೆಜ್ಜೆಯಾಗಿದೆ.