
ಸಂಜೆವಾಣಿ ನ್ಯೂಸ್
ಮೈಸೂರು, ಜು.30:- 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಪ್ರಮುಖ ಶರಣರಾದ ಶಿವಶರಣ ಹಡಪದ ಅಪ್ಪಣ್ಣ ಅವರು ಸರಳತೆ ಮತ್ತು ಕಾಯಕ ನಿಷ್ಠೆಯ ಸಾಕಾರ ಮೂರ್ತಿ ಹಾಗೂ ಸಮಾನ ಸಮಾಜದ ಹರಿಕಾರ ಎಂದು ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀ ಹಡಪದ ಅಪ್ಪಣ್ಣ ಜಯಂತೋತ್ಸವ ಸಮಿತಿ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಯಕವೇ ಕೈಲಾಸ ತತ್ವಕ್ಕೆ ಬದ್ಧರಾಗಿದ್ದ ಅಪ್ಪಣ್ಣನವರು ಬಸವಣ್ಣನವರ ನಿಜಾತ್ಮ ಹಾಗೂ ಆಪ್ತ ಕಾರ್ಯದರ್ಶಿಯಾಗಿದ್ದರು. ಬಸವಣ್ಣನವರ ಜೊತೆ ನೆರಳಿನಂತೆ ಇದ್ದ ಅವರು ಅನುಭವ ಮಂಟಪದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಬಸವಣ್ಣನವರು ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಅಪ್ಪಣ್ಣನವರ ಸಲಹೆಯನ್ನು ಗೌರವಿಸುತ್ತಿದ್ದರು ಎಂದು ತಿಳಿಸಿದರು.
ಅವರು ಕೇವಲ ಕಾಯಕಯೋಗಿಯಾಗಿರದೆ ಶ್ರೇಷ್ಠ ವಚನಕಾರರೂ ಆಗಿದ್ದರು. ಬಸವಪ್ರಿಯ ಕೂಡಲಚನ್ನಸಂಗಮದೇವ ಎಂಬ ಅಂಕಿತನಾಮದಲ್ಲಿ ಸುಮಾರು 240ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿದ್ದ ಜಾತಿ ಪದ್ಧತಿ, ಅಸಮಾನತೆ ಹಾಗೂ ಮೂಢನಂಬಿಕೆಗಳನ್ನು ತಮ್ಮ ವಚನಗಳ ಮೂಲಕ ತೀವ್ರವಾಗಿ ಖಂಡಿಸಿದರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಅಪ್ಪಣ್ಣನವರು ನಿಷ್ಠೆ, ಪ್ರಾಮಾಣಿಕತೆ ಹಾಗೂ ಇಡೀ ಸಮಾಜವನ್ನು ಜಾಗೃತಗೊಳಿಸಬೇಕು ಎಂಬ ಸ್ಪಷ್ಟ ಚಿಂತನೆ ಹೊಂದಿದ್ದ ಮಹಾನ್ ವ್ಯಕ್ತಿ. ಅವರ ಧರ್ಮಪತ್ನಿಯವರೂ ಕೂಡ ಪ್ರಸಿದ್ಧ ವಚನಕಾರ್ತಿಯಾಗಿದ್ದರು. ಅನುಭವ ಮಂಟಪವು ಜಗತ್ತಿನ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎನಿಸಿಕೊಂಡಿತ್ತು. ಬಸವಣ್ಣನವರು ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ವೃತ್ತಿ ಆಧಾರಿತ ಮೇಲು-ಕೀಳು ಭಾವನೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದರು. ಪ್ರತಿಯೊಂದು ವೃತ್ತಿಗೂ ಸಮಾನ ಗೌರವ ಹಾಗೂ ದೈವಿಕ ಸ್ಥಾನಮಾನ ನೀಡಿದರು ಎಂದು ಹೇಳಿದರು.
ಮೇಲ್ವರ್ಗ-ಕೆಳ್ವರ್ಗ ಎಂಬ ತಾರತಮ್ಯವನ್ನು ತೊಡೆದುಹಾಕಲು ಅಂತರಜಾತಿ ವಿವಾಹಗಳು ಹಾಗೂ ಸಹಭೋಜನಗಳನ್ನು ಪೆÇ್ರೀತ್ಸಾಹಿಸಿದರು. ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಜ್ಞಾನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದರು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಅವರು ಮಾತನಾಡಿ, ಯಾವುದೇ ಹುಟ್ಟು ಅಥವಾ ವೃತ್ತಿ ಕೀಳಲ್ಲ. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಅವರ ಸಂದೇಶ ಇಂದಿನ ಜಾತಿಪದ್ಧತಿ ನಿವಾರಣೆಗೆ ದಾರಿದೀಪ. ಪ್ರತಿಯೊಬ್ಬರೂ ಶ್ರಮವಹಿಸಿ ದುಡಿಯಬೇಕು ಮತ್ತು ಗಳಿಸಿದ ಶ್ರಮದ ಫಲವನ್ನು ಸಮಾಜಕ್ಕೆ ಅರ್ಪಿಸಬೇಕು ಎಂಬ ಅವರ ತತ್ವ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು.
12 ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ, ವಚನ ಸಾಹಿತ್ಯ ಮತ್ತು ಶರಣರನ್ನು ರಕ್ಷಿಸುವಲ್ಲಿ ಅಪ್ಪಣ್ಣನವರು ಪ್ರಮುಖ ಪಾತ್ರ ವಹಿಸಿದರು. ಹಡಪದ ಅಪ್ಪಣ್ಣನವರ ಜೀವನ ನಮಗೆ ಕಾಯಕನಿಷ್ಠೆ, ಸರಳತೆ, ಪ್ರಾಮಾಣಿಕತೆ ಮತ್ತು ಜಾತಿರಹಿತ ಸಮಾನತೆಯ ಸಂದೇಶವನ್ನು ನೀಡುತ್ತದೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ಅಪರ ಪ್ರಾದೇಶಿಕ ಆಯುಕ್ತರಾದ ಡಾ: ಪಿ. ಶಿವರಾಜು ಅವರು ಮಾತನಾಡಿ, ಈ ಜಗತ್ತು ಎಂದಿಗೂ ಮರೆಯಲಾಗದ ಮಹಾನ್ ಚೇತನವೆಂದರೆ ಅದು ಬಸವಣ್ಣ ಹಾಗೂ ಅಪ್ಪಣ್ಣ. ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ಮೇಲು- ಕೀಳನ್ನು ಮೆಟ್ಟಿ ನಿಲ್ಲಲು ಇರುವ ಏಕೈಕ ಶಕ್ತಿ ಎಂದರೆ ಅದು ಶಿಕ್ಷಣ. ಪೆÇೀಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಮೂಲಕ ಅವರನ್ನು ಮತ್ತಷ್ಟು ಸದೃಢರನ್ನಾಗಿ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುತ್ತುರಾಜ್, ಪರಿವರ್ತನಾ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಪಕ ಎನ್. ಧನಂಜಯ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಅವರು ಉಪಸ್ಥಿತರಿದ್ದರು.


































