ಮಂಗಳೂರು- ಮಾದಕ ದ್ರವ್ಯಗಳ ಸೇವನೆ ಮತ್ತು ವಿನಿಮಯವಾದಂತಹಾ ವಿಷವರ್ತುಲಕ್ಕೆ ಸಿಲುಕಿಕೊಂಡ ವ್ಯಕ್ತಿಗಳಿಗೆ ಸಾಮಾಜಿಕ ಬದುಕು ದುಸ್ತರವಾಗುತ್ತದೆ. ಸಾಮಾನ್ಯವಾಗಿ ಮಾದಕ ದ್ರವ್ಯಗಳ ಜಾಲಕ್ಕೆ ಗೊತ್ತಿಲ್ಲದೆ ಬಲಿಯಾಗುವವರು ಹದಿಹರೆಯದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲರೂ ಬಹಳ ಜಾಗರೂಕತೆಯಿಂದ ಇರಬೇಕು. ಈಗಿನ ವಿದ್ಯಾರ್ಥಿಗಳು ಮೊಬೈಲ್‌ನ ಚಟಕ್ಕೆ ವಿಪರೀತ ಬಲಿಯಾಗುತ್ತಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ವಾಹನ ಚಾಲನೆ ಮಾಡುವಂತಹಾ ದುಃಸ್ಸಾಹಸ ತೋರಿಸುತ್ತಿದ್ದಾರೆ. ಒಮ್ಮೆ ಒಬ್ಬ ವಿದ್ಯಾರ್ಥಿಯು ಮಾದಕ ದ್ರವ್ಯ ಸೇವನೆ ಅಥವಾ ವ್ಯಾಪಾರದಲ್ಲಿ ಸಿಲುಕಿದರೆ ಆತನಿಗೆ ಮುಂಬರುವ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳಿಂದಲೂ, ಉದ್ಯೋಗ ಅವಕಾಶಗಳಿಂದಲೂ ಕಾನೂನಾತ್ಮಕವಾಗಿ ನಿಷೇಧ ಹೇರಲ್ಪಡುತ್ತದೆ. ಸಮಾಜದಲ್ಲಿ ಸುಸಂಸ್ಕೃತ ಜೀವನ ಮಾಡಲು ಬಹಳ ಕಷ್ಟದಾಯಕವಾಗುತ್ತದೆ ಹಾಗಾಗಿ ಇಂದಿನ ವಿದ್ಯಾರ್ಥಿಗಳು ತಮ್ಮ ಕಲಿಕಾ ಹಂತದಲ್ಲಿ ಗುರು ಹಿರಿಯರಮಾರ್ಗದರ್ಶನವನ್ನು ಪಡೆದು, ಮೌಲ್ಯ ಶಿಕ್ಷಣವನ್ನು ಪಡೆದು ಸ್ವಸ್ಥ ಸಮಾಜವನ್ನು ನಿರ್ಮಿಸಬೇಕೆಂದು ಮಂಗಳೂರು ಪೂರ್ವ-ಕದ್ರಿ ಹಿಲ್ಸ್ ಪೋಲಿಸ್ ಸ್ಟೇಶನ್‌ನ ಇನ್ಸ್‌ಪೆಕ್ಟರ್ ಶ್ರೀ ಅನಂತ ಪದ್ಮನಾಭ ಇವರು ಹೇಳಿದರು.
ಶ್ರೀಯುತರು ನಗರದ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧ ದಿನಾಚರಣೆಯ ಅಂಗವಾಗಿ ಎರ್ಪಡಿಸಿದ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಶ್ರೀ ಸುಧಾಕರ ರಾವ್ (ಂ.S.I) ಶ್ರೀ ಸುರೇಶ್ (ಊeಚಿಜ ಛಿoಟಿsಣಚಿbಟe) ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರಕಾಶ್ ನಾಯ್ಕ್ ಉಪಪ್ರಾಂಶುಪಾಲೆ ಶ್ರೀಮತಿ ಅರುಣಾ ಕುಮಾರಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀಮತಿ ಮನುಜಾ ದಿನೇಶ್ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿನಿಯರಾದ ನೇಹಾ ಶೆಟ್ಟಿ ಮತ್ತು ಅನುಷಾ ಕಿಣಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ಗುರುರಾಜ್.ಬಿ ಅತಿಥಿ ಪರಿಚಯ ನೀಡಿದರು. ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಸ್ಮಿತಾ ಪೈ ನಿರೂಪಿಸಿದರು.


































