ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ಗೆ ’ಡೈಮಂಡ್ ಪ್ಲಸ್ ಎಕ್ಸಲೆನ್ಸ್ ಅವಾರ್ಡ್ ಸಮಗ್ರ ಪ್ರಶಸ್ತಿ ದೊರೆತಿದೆ.
’೨೦೨೫- ೨೬ನೇ ಸಾಲಿನಲ್ಲಿ ಸಮಾಜಮುಖಿ ಸೇವೆ, ಸದಸ್ಯತ್ವ ಅಭಿವೃದ್ಧಿ, ಪ್ರಕೃತಿ, ಪರಿಸರ, ಆರೋಗ್ಯ ಶಿಕ್ಷಣ, ನೆಲ ಜಲ- ಪರಿಸರ ಸಂರಕ್ಷಣೆ, ಕೃಷಿ, ಕಲೆ ಸಾಹಿತ್ಯ ಸಂಸ್ಕೃತಿ, ಕ್ರೀಡೆ, ಕಂಬಳ, ಸಮುದಾಯ ಕಲ್ಯಾಣ, ಅಂಗನವಾಡಿ, ವೃದ್ಧಾಶ್ರಮ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಎಂಎಸ್‌ಎಂಇಮೂಲಕ ಸ್ವ ಉದ್ಯೋಗ, ಕೈಗಾರಿಕೆ ಉದ್ಯಮ ಗಳಿಗೆ ಪ್ರೋತ್ಸಾಹ, ಶುದ್ಧ ಕುಡಿಯುವ ನೀರಿನ ಆದ್ಯತೆ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜಮುಖಿ ಕೆಲಸಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡ ಅನೇಕ ಜನಪರ ಸೇವಾ ಕಾರ್ಯಕ್ರಮಗಳನ್ನು ಪರಿಗಣಿಸಿ ರೋಟರಿ ಅಂತರ್‌ರಾಷ್ಟ್ರೀಯ ಜಿಲ್ಲೆ ೩೧೮೧ರ ಜಿಲ್ಲಾ ಅತ್ಯುತ್ತಮ ಪ್ರಶಸ್ತಿಯಾದ ’ಡೈಮಂಡ್ ಪ್ಲಸ್ನ್ನು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮುಡಿಗೇರಿಸಿಕೊಂಡಿದೆ ಎಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರೋಟರಿ ಜಿಲ್ಲಾ ೩೧೮೧ ಜಿಲ್ಲಾ ಮಟ್ಟದ ಅನುಬಂಧ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಾಗಿದೆ. ಸೇವಾ ಬದ್ಧತೆ, ಸಮುದಾಯ ಕಲ್ಯಾಣ ಕಾರ್ಯ ಚಟುವಟಿಕೆ ಗಳನ್ನು ಪರಿಗಣಿಸಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ೪೦ ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಡೈಮಂಡ್ ಪ್ಲಸ್ ಪ್ರಶಸ್ತಿ ದೊರೆತಿದೆ ಎಂದರು.
ಎಂಟು ದೇಶಗಳ ೪೫ ಜಿಲ್ಲೆಗಳಲ್ಲಿ ಆತಿಥ್ಯ ವಹಿಸಿ ರೋಟರಾಕ್ಟ್ ಸಂಸ್ಥೆಗಳ ಪ್ರಶಸ್ತಿ ಪ್ರದಾನ ಹಾಗೂ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದ ಕಾರಣಕ್ಕಾಗಿ ರೋಟರಾಕ್ಟ್ ದಕ್ಷಿಣ ಏಷ್ಯಾ ಅಧ್ಯಕ್ಷ ಡೆರಿಲ್ ಸ್ಟೀವನ್ ಡಿಸೋಜ ಅವರಿಗೆ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಸಂಸ್ಥೆಯ ಗೃಹ ವಾರ್ತಾ ಪತ್ರಿಕೆ ’ಸೆಂಟೋರ್ಗೆ ಬುಲೆಟಿನ್ ಎಕ್ಸಲೆನ್ಸ್ ಪ್ರಶಸ್ತಿ, ರೋಟರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ ಸಾಧನೆಗಾಗಿ ರೀಚ್ ಎಕ್ಸಲೆನ್ಸ್ ಪ್ರಶಸ್ತಿ, ಅತಿ ಹೆಚ್ಚಿನ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದಕ್ಕಾಗಿ ಹೈಯೆಸ್ಟ್ ಪ್ರಾಜೆಕ್ಟ್ ಪ್ರಶಸ್ತಿ, ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡಿದ್ದಕ್ಕೆ ವಿಶೇಷ ಪ್ರಶಸ್ತಿ ಸಾರ್ವಜನಿಕ ಗೌರವ ವೃದ್ಧಿ ಸೇರಿದಂತೆ ಸಮಗ್ರ ಪ್ರಶಸ್ತಿಯನ್ನು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮುಡಿಗೇರಿಸಿಕೊಂಡಿದೆ ಎಂದರು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಮಾಜಿ ಗವರ್ನರ್ ಡಾ.ದೇವದಾಸ್ ರೈ, ಸಹಾಯಕ ಗವರ್ನರ್ ಪ್ರೊ.ಚೆನ್ನಗಿರಿ ಗೌಡ, ಮಾಜಿ ಅಧ್ಯಕ್ಷರಾದ ಸಾಯಿಬಾಬಾ ರಾವ್ ಮತ್ತು ರಾಜೇಶ್ ಶೆಟ್ಟಿ ಮಾಜಿ ಸಹಾಯಕ ಗವರ್ನರ್ ರಾಜ್ ಗೋಪಾಲ್ ರೈ ನಿಯೋಜಿತ ಅಧ್ಯಕ್ಷ ರವೀಂದ್ರ ಬಿ.ಎನ್, ನಿಯೋಜಿತ ಕಾರ್ಯದರ್ಶಿ ಜಾಕ್ಸನ್ ಸಲ್ದಾನ, ಸದಸ್ಯೆ ಗೀತಾ ಬಿ ರೈ ಉಪಸ್ಥಿತರಿದ್ದರು.


































