Home ಜಿಲ್ಲೆ ರೈತರ ಪ್ರತಿಭಟನೆಗೆ ಮಣಿದ ತುಂಗಭದ್ರಾ ಮಂಡಳಿ ಪ್ರತಿ ದಿನ 2 ಸಾವಿರ ಕ್ಯೂಸೆಕ್ ನಂತೆ 10...

ರೈತರ ಪ್ರತಿಭಟನೆಗೆ ಮಣಿದ ತುಂಗಭದ್ರಾ ಮಂಡಳಿ ಪ್ರತಿ ದಿನ 2 ಸಾವಿರ ಕ್ಯೂಸೆಕ್ ನಂತೆ 10 ದಿನ ನೀರು ಬಿಡಲು ಒಪ್ಪಿಗೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಆ.19 ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಸೇರಿದಂತೆ ಮೂರು ರಾಜ್ಯಗಳ 8 ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಂಗಳವಾರ ಟಿ.ಬಿ.ಡ್ಯಾಂ ನ ತುಂಗಭದ್ರಾ ಮಂಡಳಿ ಕಛೇರಿ ಎದುರು ರೈತರು ನಡೆಸಿದ ಪ್ರತಿಭಟನೆಗೆ ಮಣಿದ ತುಂಗಭದ್ರಾ ಮಂಡಳಿ ಜಲಾಶಯದಿಂದ ಪ್ರತಿ ದಿನ 2 ಸಾವಿರ ಕ್ಯೂಸೆಕ್ ನಂತೆ 10 ದಿನಗಳ ಕಾಲ ನೀರು ಬಿಡಲು ಒಪ್ಪಿಗೆ ಸೂಚಿಸಿದೆ.

ತುಂಗಭದ್ರಾ ನದಿ ಭತ್ತಿ ಹೋಗಿರುವುದರಿಂದ ರೈತರ ಬೆಳೆಗಳಿಗೆ ನೀರು ದೊರೆಯದೆ ನದಿ ಪಾತ್ರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಜನ ಜಾನುವಾರುಗಳಯ ಹಾಗೂ ಜಲಚರಗಳು ನೀರಿಲ್ಲದೆ ತೊಂದರೆ ಅನುಭವಿಸುತ್ತಿವೆ. ಈ ಹಿನ್ನಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ತಕ್ಷಣ ನದಿಗೆ ನೀರು ಬಿಡಬೇಕು ಎಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ನೂರಾರು ರೈತರು ಮಂಗಳವಾರ ತುಂಗಭದ್ರಾ ಮಂಡಳಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಪ್ರತಿಭಟನೆಯ ನಡುವೆಯೇ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ರೈತರ ಬೇಡಿಕೆಯನ್ನು ಮಂಡಳಿ ಒಪ್ಪಿಕೊಂಡಿದ್ದು. ಪ್ರತಿ ದಿನ 2 ಸಾವಿರ ಕ್ಯೂಸೆಕ್ ನಂತೆ 10 ದಿನಗಳ ಕಾಲ ನದಿಗೆ ನೀರು ಬಿಡಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ರೈತರಿಗೆ ತಿಳಿಸಿದರು. ಹೀಗಾಗಿ ಅನಿರ್ದಿಷ್ಟ ಅವಧಿಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದ ರೈತರು ತಮ್ಮ ನಿರ್ಧಾರ ಕೈಬಿಟ್ಟು ಪ್ರತಿಭಟನೆ ಸ್ಥಗಿತಗೊಳಿಸಿದರು.

ಪ್ರತಿಭಟನೆ ನಡೆಯುತ್ತಿದ್ದ ಒಂದು ಹಂತದಲ್ಲಿ ಶಾಸಕ ಬಾದರ್ಲಿ ಮತ್ತು ಮಾಜಿ ಶಾಸಕ ಬಸವರಾಜ ದಡೇಸುಗೂರು ನಡುವೆ ಸಚಿವ ಶಿವರಾಜ ತಂಗಡಗಿ ಅವರನ್ನು ಗುರಿಯಾಗಿಸಿಕೊಂಡು ಮಾತಿನ ಚಕಮಕಿ ನಡೆಯಿತು. ಇತರ ರೈತರಿಂದಲೂ ಗದ್ದಲ, ಗಲಾಟೆ ನಡೆಯಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ತಂಗಡಗಿ ವಿರುದ್ದ ಆಕ್ರೋಶ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕುರಿತು ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆಗಿರುವ ಸಚಿವ ತಂಗಡಗಿ ಅವರಿಗೆ ತುಂಗಭದ್ರಾ ಜಲಾಶಯ ಸೇರಿದಂತೆ ನೀರಾವರಿ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅಂತಹವರಿಂದ ರೈತರಿಗೆ ನ್ಯಾಯ ದೊರಕಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸ್ಥಾನದಿಂದ ರಾಜೀನಾಮೆ ಪಡೆಯಬೇಕು. ರಾಜೀನಾಮೆ ನೀಡದಿದ್ದರೆ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರನ್ನು ಪ್ರತಿಭಟನಾನಿರತ ರೈತರು ಒತ್ತಾಯಿಸಿದ್ದು ಕಂಡು ಬಂದಿತು.

ಬಚಾವತ್ ಆಯೋಗದ ವರದಿ ಪ್ರಕಾರವೇ ತುಂಗಭದ್ರಾ ಜಲಾಶಯದ ನೀರಿನ ಹಂಚಿಕೆ ಮಾಡಲಾಗುತ್ತಿದೆ. ತುಂಗಭದ್ರಾ ನದಿ ಭತ್ತದಂತೆ ನೋಡಿಕೊಳ್ಳಲು ವರದಿಯಲ್ಲಿ ಆದೇಶಿಸಲಾಗಿದೆ. ಅದರೆ ಆ ಆದೇಶವನ್ನು ಜಾರಿ ಮಾಡುವಲ್ಲಿ ತುಂಗಭದ್ರಾ ಮಂಡಳಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಹಂಪನಗೌಡ ಬಾದರ್ಲಿ

ಶಾಸಕ, ಸಿಂಧನೂರು.

ಶಾಸಕರು, ಸಚಿವರು ಯಾರೇ ಇರಲಿ, ಸರ್ಕಾರ ಯಾವುದೇ ಆಗಿರಲಿ ನದಿಗೆ ನೀರು ಬಿಡಲೇ ಬೇಕು. ನದಿಗೆ ನೀರು ಬಿಡದಿರುವುದರಿಂದ ಜಲಚರಗಳು ಸಾಯುತ್ತಿವೆ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರಿಗೆ ನೀರಿನ ಅರಿವು, ನೆಲ, ಜಲ ಸಂಸ್ಕೃತಿ ಬಗ್ಗೆ ಎನೂ ಗೊತ್ತಿಲ್ಲ. ಅಂತಹವರು ಅಧ್ಯಕ್ಷ ಆಗಿದ್ದಾರೆ. ನಾವು ಹೋರಾಟ ಮಾಡಿಯಾದರೂ ನೀರು ಪಡೆಯುತ್ತೇವೆ.

ಬಸವರಾಜ ದಡೆಸೂಗೂರು

ಮಾಜಿ ಶಾಸಕ.

ತುಂಗಭದ್ರಾ ಮಂಡಳಿ ತೀರ್ಮಾನದ ಬಗ್ಗೆ ನಮಗೆ ಸಮಾಧಾನ ಇಲ್ಲ. ನದಿಗೆ ನೀರು ಬಿಡುವ ಕುರಿತು ಸರ್ಕಾರ ಅಧಿಕೃತ ಘೋಷಣೆ  ಮಾಡಬೇಕು. ಜಲಾಶಯಕ್ಕೆ ಬರುತ್ತಿರುವ ಒಳ ಹರಿವು ನೋಡಿದರೆ, 100 ಟಿಎಂಸಿ ಗೂ ಅಧಿಕ ನೀರು ಜಲಾಶಯಕ್ಕೆ  ಹರಿದು ಬಂದಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿಕೊಂಡು ಕಳ್ಳ ಲೆಕ್ಕ ನೀಡುವ ಮೂಲಕ ನೀರನ್ನು ಕಾರ್ಖಾನೆಗಳಿಗೆ ಮಾರಿಕೊಳ್ಳುತ್ತಿದ್ದಾರೆ. ಐಸಿಸಿ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಸರಟ್ಟಿ ಶರಣೇಗೌಡ

ರಾಜ್ಯಾಧ್ಯಕ್ಷ

ಅನ್ನದಾತ ರೈತ ಸಂಘ