Home ಜಿಲ್ಲೆ ಮಂಗಳೂರು ರಿಯಲ್ ಎಸ್ಟೇಟ್ ಹೂಡಿಕೆ ಹೆಸರಿನಲ್ಲಿ ?೭೦ ಲಕ್ಷ ವಂಚನೆ; ಬ್ಲ್ಯಾಕ್‌ಮೇಲ್, ಜೀವ ಬೆದರಿಕೆ ಆರೋಪ ?...

ರಿಯಲ್ ಎಸ್ಟೇಟ್ ಹೂಡಿಕೆ ಹೆಸರಿನಲ್ಲಿ ?೭೦ ಲಕ್ಷ ವಂಚನೆ; ಬ್ಲ್ಯಾಕ್‌ಮೇಲ್, ಜೀವ ಬೆದರಿಕೆ ಆರೋಪ ? ಮಹಿಳೆ ಬಂಧನ

ಉಡುಪಿ-ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ ?೭೦ ಲಕ್ಷ ಪಡೆದು ವಂಚನೆ ಎಸಗಿರುವುದಲ್ಲದೆ, ಅಶ್ಲೀಲ ವಿಡಿಯೋಗಳ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಮೂಲದ ದೂರುದಾರರು ಉಡುಪಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವೇಳೆ ಆರೋಪಿತೆ ಝೀನತ್ ಇಬ್ರಾಹಿಂ ಅವರ ಪರಿಚಯವಾಗಿದ್ದು, ಇಬ್ಬರೂ ಸೇರಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಆರಂಭಿಸಿದ್ದರು. ಆರೋಪಿತೆಯ ಮಾತುಗಳನ್ನು ನಂಬಿದ ದೂರುದಾರರು ಹೂಡಿಕೆ ಉದ್ದೇಶದಿಂದ ?೭೦ ಲಕ್ಷವನ್ನು ನೀಡಿದ್ದು, ಆ ಹಣವನ್ನು ಜಮೀನು ಖರೀದಿಗೆ ಬಳಸದೇ ಆರೋಪಿತೆ ತನ್ನ ವೈಯಕ್ತಿಕ ಉದ್ದೇಶಗಳಿಗೆ ಬಳಸಿ ವಂಚನೆ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಕಚೇರಿಯನ್ನು ಮುಚ್ಚುವ ಸಂದರ್ಭದಲ್ಲಿ ದೂರುದಾರರಿಗೆ ಕೆಲವು ರಹಸ್ಯ ಕಡತಗಳು ಹಾಗೂ ಪೆನ್‌ಡ್ರೈವ್‌ಗಳು ದೊರೆತಿದ್ದು, ಅವುಗಳಲ್ಲಿ ಹಲವು ಪ್ರಭಾವಿ ವ್ಯಕ್ತಿಗಳ ಖಾಸಗಿ ಹಾಗೂ ಅಶ್ಲೀಲ ಛಾಯಾಚಿತ್ರಗಳು ಮತ್ತು ವಿಡಿಯೋಗಳು ಇರುವುದನ್ನು ಕಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಆರೋಪಿತೆ ದೂರುದಾರರ ಹೊಸ ಕಚೇರಿಗೆ ಬಂದು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೆ, ದೂರುದಾರರ ಅಶ್ಲೀಲ ವಿಡಿಯೋಗಳು ತನ್ನ ಬಳಿ ಇವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿರುವುದಲ್ಲದೆ, ಪತ್ನಿ ಹಾಗೂ ಮಕ್ಕಳನ್ನು ಅಪಹರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸಬೀನಾ ಇಲಿಯಾಸ್ ಸೇರಿದಂತೆ ಇತರರು ಆರೋಪಿತೆಯೊಂದಿಗೆ ಸೇರಿ ಬ್ಲ್ಯಾಕ್‌ಮೇಲ್ ಮಾಡಿ ಅಕ್ರಮವಾಗಿ ಹಣ ವಸೂಲಿ ಮಾಡುವ ವಂಚನಾ ಜಾಲ ನಡೆಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ ೭೯/೨೦೨೬ರಂತೆ ಬಿಎನ್‌ಎಸ್ ಕಲಂ ೩೦೮(೬), ೩೫೧(೨), ೩೧೮(೨) ಹಾಗೂ ೩(೫) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತರ ಪತ್ತೆಗಾಗಿ ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಭರತೇಶ್ ಕಂಕಣವಾಡಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಜುಲೈ ೨ರಂದು ಪಡುಬಿದ್ರೆ ಠಾಣಾ ವ್ಯಾಪ್ತಿಯ ಕಂಚಿನಡ್ಕ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದ ಝೀನತ್ (ತಂದೆ: ಇಬ್ರಾಹಿಂ, ಪತಿ: ಅಬ್ದುಲ್ ಸಲಾಂ) ಅವರನ್ನು ಬಂಧಿಸಿದೆ.
ಬಂಧಿತ ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದೇ ರೀತಿಯಲ್ಲಿ ಆರೋಪಿತೆಯಿಂದ ಯಾರಿಗಾದರೂ ಮೋಸ ಅಥವಾ ವಂಚನೆ ಆಗಿದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.