ಬೆಂಗಳೂರು,ಜು2: ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜಧನ ಪಾವತಿ ಅವ್ಯವಸ್ಥೆಯಿಂದ ಗಣಿ ಗುತ್ತಿಗೆದಾರರಿಗೆ ಆಗಿರುವ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ತೀವ್ರ ಅಸಮಾದಾನ ವ್ಯಕ್ತಪಡಿಸಿತು.
ವತಿಯಿಂದ ವಿವಿಧ ಸಮಸ್ಯೆಗಳ ಕುರಿತು ಮಾಧ್ಯಮಗೋಷ್ಠಿ ನಡೆಯಿತು.
ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಮಾತನಾಡಿ, 2023ರಲ್ಲಿ ಕಾನೂನುಬದ್ಧವಾಗಿ ಗಣಿ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಬೆಳಗಾವಿ ವಿಧಾನಸಭೆಯ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ 10 ವರ್ಷಗಳಿಂದ ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ. ಅಕ್ರಮ ಗಣಿಗಾರಿಕೆಗೆ ತಡೆ ಹಾಕಿ, ಪ್ರಾಮಾಣಿಕ ಗಣಿ ಮಾಲೀಕರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ವೈಜ್ಞಾನಿಕ ಮಾನದಂಡಗಳನ್ನು ಪಾಲಿಸದೆ ಹಾಗೂ ಕ್ವಾರಿ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸಿರುವ ಡ್ರೋನ್ ಸಮೀಕ್ಷೆಯನ್ನು ಆಧರಿಸಿ ರಾಜಧನ ಪಾವತಿ ಬಾಕಿ ಮತ್ತು ದಂಡ ವಿಧಿಸಲು ಮುಂದಾಗಿರುವ ಕ್ರಮವನ್ನು ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ತೀವ್ರವಾಗಿ ವಿರೋಧಿಸಿದೆ ಎಂದರು.
ನಂತರ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ ಅವರು, “ಒಮ್ಮೆ ಮಾತ್ರದ ಇತ್ಯರ್ಥ ಯೋಜನೆಯಡಿ ರಾಜಧನ ಪಾವತಿ ಬಾಕಿಯನ್ನು ಪಾವತಿಸುವಂತೆ ಸರ್ಕಾರ ಸೂಚಿಸಿದೆ. ಆದರೆ ವೈಜ್ಞಾನಿಕವಲ್ಲದ ಡ್ರೋನ್ ಸಮೀಕ್ಷೆಯನ್ನು ಆಧರಿಸಿ ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ಒಬ್ಬೊಬ್ಬ ಮಾಲೀಕರಿಗೆ ವಿಭಿನ್ನ ಪ್ರಮಾಣದಲ್ಲಿ ದಂಡ ನಿಗದಿಪಡಿಸಲಾಗಿದ್ದು, ಕನಿಷ್ಠ 50 ಲಕ್ಷದವರೆಗೆ ದಂಡ ವಿಧಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸುವುದು ಸಾಧ್ಯವಿಲ್ಲ” ಎಂದು ಹೇಳಿದರು.
ಈ ಸಂಬಂಧ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ರಾಜಧನ ಪಾವತಿ ಸಂಗ್ರಹಣೆ ಕುರಿತಂತೆ ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಗೌರವಾನ್ವಿತ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ ಎಂದು ಅವರು ತಿಳಿಸಿದರು.ಒಕ್ಕೂಟದ ಉಪಾಧ್ಯಕ್ಷ ಕಿರಣ್ ಜೈನ್ ಮಾತನಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತೆ ಅದೇ ರಾಜಧನ ಪಾವತಿಯನ್ನು ಕ್ವಾರಿ ಮಾಲೀಕರಿಂದ ವಸೂಲಿ ಮಾಡುವುದು ದ್ವಿಗುಣ ವಸೂಲಿ ಆಗಿದ್ದು, ಇದು ಸಂಪೂರ್ಣ ಅನ್ಯಾಯ” ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಗೌರವಾಧ್ಯಕ್ಷ ಆಶಾ ಪ್ರಸನ್ನ, ಉಪಾಧ್ಯಕ್ಷರು ಕಿರಣ್ ಜೈನ್, ಪ್ರದೀಪ್, ಪ್ರಶಾಂತ್ ಉಪ್ಪರಗಿ, ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಹಾಗೂ ಬಸವರಾಜ್, ವೆಂಕಟೇಶ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
































