
ನವದೆಹಲಿ, ನ.೨೯: ಮಹಿಳೆಯರಿಗೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಮಹತ್ವದ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ನಾಳೆಯಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸಂವಿಧಾನದ ೧೩೨ನೇ ತಿದ್ದುಪಡಿ ಮಸೂದೆ ಸೇರಿದಂತೆ ಮೂರು ಪ್ರಮುಖ ಮಸೂದೆಗಳನ್ನು ಲೋಕಸಭೆಯಲ್ಲಿ ಚರ್ಚಿಸಿ ಅಂಗೀಕಾರಕ್ಕೆ ಮಂಡಿಸಲು ಕಾರ್ಯಸೂಚಿ ಸಿದ್ಧಪಡಿಸಲಾಗಿದೆ.
ವಿಶೇಷ ಅಧಿವೇಶನದಲ್ಲಿ ಮೂರು ಮಸೂದೆ ಕುರಿತು ಆಡಳಿತ-ಪ್ರತಿಪಕ್ಷಳ ನಡುವೆ ಕಾವೇರಿದ ಚರ್ಚೆ, ಜಟಾಪಟಿಗೆ ವೇದಿಕೆಯಾಗಲಿದೆ.
ಈ ಮಸೂದೆಗಳು ಜಾರಿಗೆ ಬಂದರೆ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ಈಗಿರುವ ೫೪೩ರಿಂದ ೮೧೬ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ, ೨೦೨೯ರ ಲೋಕಸಭೆ ಚುನಾವಣೆಯಿಂದ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಸ್ಥಾನಗಳನ್ನು ಶೇ.೫೦ರಷ್ಟು ಹೆಚ್ಚಿಸುವ ಪ್ರಸ್ತಾವನೆಯೂ ಈ ಕಾನೂನು ಚೌಕಟ್ಟಿನ ಪ್ರಮುಖ ಭಾಗವಾಗಿದೆ.
ಮೂರು ಪ್ರಮುಖ ಮಸೂದೆಗಳು ಯಾವುವು?
ಸಂವಿಧಾನದ (೧೩೨ನೇ ತಿದ್ದುಪಡಿ) ಮಸೂದೆ, ೨೦೨೬
ಲೋಕಸಭೆ, ರಾಜ್ಯ ವಿಧಾನಸಭೆಗಳು ಹಾಗೂ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಜಾರಿಗೆ ಅಗತ್ಯವಾದ ಸಂವಿಧಾನಾತ್ಮಕ ಬದಲಾವಣೆಗಳನ್ನು ತರುವುದು ಈ ಮಸೂದೆಯ ಪ್ರಮುಖ ಉದ್ದೇಶ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇದನ್ನು ಮಂಡಿಸಲಿದ್ದಾರೆ.
ಕ್ಷೇತ್ರ ಮರುವಿಂಗಡಣೆ (ಎರಡನೇ) ಮಸೂದೆ, ೨೦೨೬
ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರಗಳ ಮರುವಿಂಗಡಣೆ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಥಾನಗಳ ಮರುಹಂಚಿಕೆ ಮತ್ತು ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳನ್ನು ಗುರುತಿಸುವ ಪ್ರಕ್ರಿಯೆಗೆ ಈ ಮಸೂದೆ ಅವಕಾಶ ಕಲ್ಪಿಸಲಿದೆ.
ಇದರಂತೆ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ರಚಿಸಿ, ಜನಗಣತಿಯ ಇತ್ತೀಚಿನ ಅಂಕಿಅಂಶಗಳ ಆಧಾರದಲ್ಲಿ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವ ಪ್ರಸ್ತಾವನೆಯಿದೆ. ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ಆಯೋಗ ನಿರ್ಧರಿಸುವ ರೀತಿಯಲ್ಲಿ ಆವರ್ತನ ಪದ್ಧತಿಯಡಿ ಹಂಚಿಕೆ ಮಾಡುವ ಅಂಶವೂ ಮಸೂದೆಯಲ್ಲಿದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ಎರಡನೇ ತಿದ್ದುಪಡಿ) ಮಸೂದೆ, ೨೦೨೬:
ದೆಹಲಿ, ಜಮ್ಮು-ಕಾಶ್ಮೀರ ಮತ್ತು ಪುದುಚೇರಿಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಅನುಕೂಲವಾಗುವಂತೆ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರಲು ಈ ಮಸೂದೆ ಉದ್ದೇಶಿಸಿದೆ. ೧೯೬೩ರ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ, ೧೯೯೧ರ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಕಾಯ್ದೆ ಹಾಗೂ ೨೦೧೯ರ ಜಮ್ಮು-ಕಾಶ್ಮೀರ ಮರುಸಂಘಟನೆ ಕಾಯ್ದೆಗಳಿಗೆ ಬದಲಾವಣೆ ತರಲು ಪ್ರಸ್ತಾಪಿಸಲಾಗಿದೆ. ಇದನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ.
ಹಳೆಯ ಮಸೂದೆ ಹಿಂಪಡೆದು ಹೊಸ ಮಸೂದೆ
ಕೇಂದ್ರ ಸರ್ಕಾರ ಇದೇ ವರ್ಷದ ಏಪ್ರಿಲ್ ೧೬ರಂದು ಲೋಕಸಭೆಯಲ್ಲಿ ಮಂಡಿಸಿದ್ದ ಮೂಲ ಕ್ಷೇತ್ರ ಮರುವಿಂಗಡಣೆ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಗಳನ್ನು ಹಿಂಪಡೆಯಲಿದೆ. ಅವುಗಳ ಬದಲಿಗೆ ಪರಿಷ್ಕೃತ ಎರಡನೇ ಮಸೂದೆಗಳನ್ನು ಮಂಡಿಸಲು ನಿರ್ಧರಿಸಿದೆ. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದ ಅಂಶಗಳನ್ನು ಸಮಗ್ರವಾಗಿ ಜಾರಿಗೊಳಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ.
ಮೂರು ಮಸೂದೆಗಳನ್ನು ಒಂದೇ ಹಂತದಲ್ಲಿ ಪರಿಗಣಿಸಿ ಅಂಗೀಕರಿಸಲು ಅನುಕೂಲವಾಗುವಂತೆ ಲೋಕಸಭೆಯ ನಿಯಮ ೬೬ರ ಅನ್ವಯ ಕೆಲವು ಕಾರ್ಯವಿಧಾನಾತ್ಮಕ ನಿಯಮಗಳ ಅನ್ವಯವನ್ನು ಅಮಾನತುಗೊಳಿಸುವ ನಿರ್ಣಯವನ್ನೂ ಕಾನೂನು ಸಚಿವರು ಮಂಡಿಸಲಿದ್ದಾರೆ.
ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಯು ರಾಜಕೀಯ ವಲಯದಲ್ಲಿ ಈಗಾಗಲೇ ಚರ್ಚೆಗೆ ಕಾರಣವಾಗಿದೆ. ಕ್ಷೇತ್ರಗಳ ಮರುಹಂಚಿಕೆಯಿಂದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯದಲ್ಲಿ ಉಂಟಾಗಬಹುದಾದ ಬದಲಾವಣೆಗಳ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ಈ ಪ್ರಸ್ತಾವನೆಯ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಡಿಎಂಕೆ ಮತ್ತು ಎನ್ಸಿಪಿ (ಶರದ್ಚಂದ್ರ ಪವಾರ್ ಬಣ) ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿವೆ ಎನ್ನಲಾಗಿದೆ. ಡಿಎಂಕೆ ಸಂಸದೆ ಕನಿಮೋಳಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಪಕ್ಷದ ನಿಲುವನ್ನು ತಿಳಿಸಿದ್ದಾರೆ.
ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಮೂರನೇ ಎರಡರಷ್ಟು ಬಹುಮತ ಅಗತ್ಯವಿದೆ. ಅಲ್ಲದೆ, ಸಂವಿಧಾನದ ಸಂಬಂಧಿತ ವಿಧಿಗಳ ಅನ್ವಯ ಕನಿಷ್ಠ ಅರ್ಧದಷ್ಟು ರಾಜ್ಯಗಳ ವಿಧಾನಮಂಡಲಗಳ ಅನುಮೋದನೆಯೂ ಅಗತ್ಯವಾಗಬಹುದು.
ನವೆಂಬರ್ ೩೦ರಿಂದ ಡಿಸೆಂಬರ್ ೩ರವರೆಗೆ ಲೋಕಸಭೆಯ ವಿಶೇಷ ಅಧಿವೇಶನ ನಡೆಯಲಿದ್ದು, ಡಿಸೆಂಬರ್ ೨ರಿಂದ ರಾಜ್ಯಸಭೆಯ ಕಲಾಪ ಆರಂಭವಾಗಲಿದೆ. ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮತ್ತು ರಾಜ್ಯಗಳ ಪ್ರಾತಿನಿಧ್ಯದ ಕುರಿತು ಈ ಅಧಿವೇಶನದಲ್ಲಿ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಯಿದೆ.





















