Home ಜಿಲ್ಲೆ ಮಂಗಳೂರು ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಸಿಪಿಎಂ ಮಾನವ ಸರಪಳಿ

ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಸಿಪಿಎಂ ಮಾನವ ಸರಪಳಿ

ಮಂಗಳೂರು-ಕಾರ್ಪೊರೇಟ್ ಕುಳಗಳು ಆರೋಗ್ಯ ರಂಗಕ್ಕೆ ಪ್ರವೇಶ ಪಡೆದ ಬಳಿಕ ಜನ ಸಾಮಾನ್ಯರಿಗೆ ಅಗತ್ಯ ಚಿಕಿತ್ಸೆಗಳು ಕೈಗೆಟುಕದಷ್ಟು ದುಬಾರಿಯಾಗಿದೆ. ಖಾಸಗಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಹಿತಾ ಸಕ್ತಿಗಳಿಗೆ ಪೂರಕವಾಗಿರುವ ಸರಕಾರಗಳು ಈಗ ಸರಕಾರಿ ಆರೋಗ್ಯ ಸೇವೆಗಳನ್ನು ದುರ್ಬಲಗೊಳಿಸುವ, ಪಿಪಿಪಿ ಮಾದರಿಯನ್ನು ಸರಕಾರಿ ಆರೋಗ್ಯ ಸೇವೆಗಳಿಗೆ ಅನ್ವಯಿಸುವ ಅಪಾಯಕಾರಿ ನಡೆಗಳನ್ನು ಪ್ರದರ್ಶಿಸುತ್ತಿದೆ. ಅದರ ಭಾಗವಾಗಿ ದ.ಕ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಧಾರೆಯೆರೆದು ಕೊಡುವ ಆದೇಶ ಹೊರಡಿಸಿದೆ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವ ಹಕ್ಕಿನಿಂದ ಜನಸಾಮಾನ್ಯರು ಮತ್ತಷ್ಟು ವಂಚಿತರಾಗಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಲಾಬಿಗಳಿಂದ ಉಳಿಸಲು ಜನತೆ ಬೀದಿಗಿಳಿದು ಹೋರಾಟ ನಡೆಸಬೇಕಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಹೇಳಿದರು.
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಸರಕಾರದ ಆದೇಶ ಕೈ ಬಿಡಬೇಕು ಮತ್ತು ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸ ಬೇಕು, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು ಎಂಬ ಬೇಡಿಕೆ ಮುಂದಿಟ್ಟು ನಗರದ ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಸಿಪಿಎಂ ಮಂಗಳೂರು ಉತ್ತರ ಸಮಿತಿ ನಡೆಸಿದ ಮಾನವ ಸರಪಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ ಆರೋಗ್ಯ ಸಚಿವ ಯು.ಟಿ. ಖಾದರ್ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳ ಮೇಲಿರುವ ಕಾಳಜಿ ಸರಕಾರಿ ಆಸ್ಪತ್ರೆಗಳ ಮೇಲಿಲ್ಲ ಎಂದು ಆರೋಪಿಸಿದರು.
ಸಿಪಿಎಂ ಮಂಗಳೂರು ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಎಂ ಉತ್ತರ ಸಮಿತಿಯ ಪ್ರಮುಖರಾದ ರವಿಚಂದ್ರ ಕೊಂಚಾಡಿ, ಶ್ರೀನಾಥ್ ಕುಲಾಲ್, ಕೃಷ್ಣ ತಣ್ಣೀರುಬಾವಿ, ನ್ಯಾಯ ವಾದಿ ಸುನಂದ ಕೊಂಚಾಡಿ, ನೌಷಾದ್ ಬಾವು ಪಂಜಿಮೊಗರು, ನಿತಿನ್ ಬಂಗೇರ, ಮುಸ್ತಫಾ ಪಂಜಿಮೊಗರು, ಅಶೋಕ್ ಶ್ರೀಯಾನ್, ಶಶಿ ಗುಂಡಳಿಕೆ, ಶಶಿಧರ ಶಕ್ತಿನಗರ, ಪ್ರವೀಣ್ ಕೊಂಚಾಡಿ, ಆಶಾ ಬೋಳೂರು ಮಾನವ ಸರಪಳಿಯ ನೇತೃತ್ವವನ್ನು ವಹಿಸಿದ್ದರು.