
ಪುತ್ತೂರು: ಬೀದಿ ನಾಯಿಗಳಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಹಾಗೂ ಬೀದಿ ನಾಯಿಗಳ ಪೋಷಣೆಗಾಗಿ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಡಾಗ್ ಶೆಲ್ಟರ್ ನಿರ್ಮಾಣ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಅವರು ಶನಿವಾರ ಮಾದ್ಯಮದೊಂದಿಗೆ ಮಾತನಾಡುತ್ತಾ ಬೀದಿ ನಾಯಿಗಳಿಂದ ಹಾವಳಿ ಉಂಟಾಗುತ್ತಿರುವ ಬಗ್ಗೆ ದೂರು ಬರುತ್ತಿದೆ. ನಗರದಲ್ಲಿ ಸಾರ್ವಜನಿಕರಿಗೆ ಬೀದಿ ನಾಯಿಗಳು ತೊಂದರೆ ನೀಡುತ್ತಿದೆ. ನಾಯಿಗಳಿಂದ ತೊಂದರೆ ಆದಲ್ಲಿ ಜನರು ಮೊದಲು ನಾಯಿಗೆ, ಬಳಿಕ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಬೈಯುತ್ತಾರೆ. ಈ ನಿಟ್ಟಿನಲ್ಲಿ ಜನರ ಸುರಕ್ಷತೆ ಮತ್ತು ಬೀದಿ ನಾಯಿಗಳ ಸುರಕ್ಷತೆ ಇವೆರಡನ್ನೂ ಮನಗಂಡು ಪುತ್ತೂರಿನಲ್ಲಿ ಡಾಗ್ ಶೆಲ್ಟರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ೨.೫ ಎಕ್ರೆ ಜಾಗವನ್ನು ನೋಟಿಫೈ ಮಾಡಲಾಗಿದೆ. ಆದರೆ ಗುರುತಿಸಲಾಗಿರುವ ಜಾಗದಲ್ಲಿ ಈ ಭಾಗದ ಜನರಿಂದ ಇಲ್ಲಿ ನೂರಿನ್ನೂರು ನಾಯಿಗಳನ್ನು ತಂದು ಹಾಕಿದಲ್ಲಿ ರಾತ್ರಿ ನಿದ್ದೆ ಮಾಡಲು ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಸಾರ್ವಜನಿಕರ ವಿರೋಧವಿರುವ ಕಾರಣ ಗುರುತಿಸಲಾದ ಜಾಗದಲ್ಲಿ ಶೆಲ್ಟರ್ ನಿರ್ಮಾಣ ಮಾಡಲಾಗುವುದಿಲ್ಲ. ಬದಲಿಗೆ ಒಂದು ತಿಂಗಳ ಒಳಗಾಗಿ ಫಾರೆಸ್ಟ್ ಪಕ್ಕದಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಂಡು ಡಾಗ್ ಶೆಲ್ಟರ್ ನಿರ್ಮಾಣ ಮಾಡುತ್ತೇವೆ. ಪುತ್ತೂರಿನಲ್ಕಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಡಾಗ್ ಶೆಲ್ಟರ್ ಇದಾಗಲಿದ್ದು, ಇದನ್ನು ಮಾದರಿ ಶೆಲ್ಟರ್ ಆಗಿ ರೂಪಿಸುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.


































