
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.27: ನಗರದ 4 ವರ್ಷ 5 ತಿಂಗಳ ಬಾಲಕಿ ಅನ್ವಿಕಾ ವಿ. ಅತಿ ಕಡಿಮೆ ಅವಧಿಯಲ್ಲಿ ವಿಶ್ವದ ವಿವಿಧ ದೇಶಗಳ ಧ್ವಜಗಳನ್ನು ಗುರುತಿಸುವ ಮೂಲಕ ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕಳೆದ ಮಾರ್ಚ್ 13 ರಂದು ನಡೆದ ಸ್ಪರ್ಧೆಯಲ್ಲಿ ಅನ್ವಿಕಾ ಮೊಬೈಲ್ ಪರದೆಯ ಮೇಲೆ ಮೂಡಿಬಂದ 100 ದೇಶಗಳ ಧ್ವಜಗಳನ್ನು ಕೇವಲ 1 ನಿಮಿಷ 38 ಸೆಕೆಂಡುಗಳಲ್ಲಿ ಗುರುತಿಸಿ, ಅವುಗಳ ಹೆಸರನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ‘ಮೊಬೈಲ್ ಪರದೆಯ ಮೇಲೆ 100 ದೇಶಗಳ ಧ್ವಜಗಳನ್ನು ಅತಿ ವೇಗವಾಗಿ ಗುರುತಿಸಿ ಹೆಸರಿಸಿದ ಪ್ರಿಸ್ಕೂಲರ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಳ್ಳಾರಿ ಮೂಲದ ಈ ಪುಟ್ಟ ಬಾಲಕಿಯ ಅಸಾಧಾರಣ ಸ್ಮರಣಶಕ್ತಿ ಮತ್ತು ಏಕಾಗ್ರತೆಗೆ ಜಾಗತಿಕ ಮನ್ನಣೆ ಸಿಕ್ಕಿದೆ. ಅನ್ವಿಕಾಳ ಈ ವಿಶಿಷ್ಟ ಸಾಧನೆಯನ್ನು ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ ಅಧಿಕೃತವಾಗಿ ದಾಖಲಿಸಿಕೊಂಡಿದ್ದು ಪ್ರಶಂಸೆ ವ್ಯಕ್ತವಾಗುತ್ತಿದೆ.
ಅನ್ವಿಕಾ ಅವರು ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ವಿನೋದ್ ಕುಮಾರ್ ಸಿ. ಅವರ ಪುತ್ರಿ.























