
ಪುತ್ತೂರು: ಪುತ್ತೂರಿನ ಮಹಿಳಾ ಪ್ರಥಮದರ್ಜೆ ಸರ್ಕಾರಿ ಕಾಲೇಜಿನಲ್ಲಿ ಈ ವರ್ಷದ ಶೈಕ್ಷಣಿಕ ಅವಧಿಯಿಂದಲೇ ವಿಜ್ಞಾನ ವಿಭಾಗ (ಸೈನ್ಸ್) ಆರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಪುತ್ತೂರಿನ ಹಳೆಯ ತಾಲೂಕು ಕಚೇರಿ ಮತ್ತು ಜೈಲು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಕೇವಲ ಬಿಎ ಮತ್ತು ಬಿಕಾಂ ಪದವಿ ತರಗತಿಗಳಿದ್ದವು. ಇಲ್ಲಿ ಕಟ್ಟಡಗಳ ಸಂಕೀರ್ಣತೆಯಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸಿತ್ತು. ಈ ಹಿನ್ನಲೆಯಲ್ಲಿ ಈಗಾಗಲೇ ಬೊಳುವಾರಿನಲ್ಲಿ ಕಾಲೇಜಿನ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಈ ಶೈಕ್ಷಣಿಕ ಅವಧಿ ನೂತನ ಕಟ್ಟಡದಲ್ಲಿ ಆರಂಭವಾಗಲಿದೆ.
ಬುಧವಾರ ಬೆಂಗಳೂರಿನಲ್ಲಿ ಉನ್ನತಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಪುತ್ತೂರಿನ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಕೊರತೆ ಇದೆ. ಸಾಕಷ್ಟು ವಿದ್ಯಾರ್ಥಿನಿಯರು ಹಾಗೂ ಪೋಷಕರು ಈ ಬಗ್ಗೆ ಬೇಡಿಕೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಕಾಲೇಜಿನ ನೂತನ ಕಟ್ಟಡದಲ್ಲಿ ಕೊಠಡಿಗಳ ಕೊರತೆ ನಿವಾರಣೆಯಾಗಿದೆ. ಹಾಗಾಗಿ ಇಲ್ಲಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂಧಿಸಿದ ಸಚಿವರು ಈ ಶೈಕ್ಷಣಿಕ ಅವಧಿಯಿಂದಲೇ ವಿಜ್ಞಾನ ವಿಭಾಗ ಪ್ರಾರಂಭ ಮಾಡಲು ಸೂಚನೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
೧ ಕೋಟಿ ಅನುದಾನಕ್ಕೆ ಮನವಿ
ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಪೀಠೋಪಕರಣಕ್ಕೆ ರೂ.೧ ಕೋಟಿ ಅನುದಾನ ನೀಡುವಂತೆ ಈ ಸಂದರ್ಭ ಶಾಸಕರು ಸಚಿವರಿಗೆ ಮನವಿ ಮಾಡಿದರು. ವಿಜ್ಷಾನ ವಿಭಾಗಕ್ಕೆ ಅಗತ್ಯವಾದ ಪ್ರಯೋಗಾಲಯ ಮತ್ತಿತರ ಅಗತ್ಯ ಪರಿಕರಗಳನ್ನು ಒದಗಿಸುವಂತೆ ವಿನಂತಿ ಮಾಡಿದರು. ಈ ಬಗ್ಗೆ ಅನುದಾನ ನೀಡುವುದಾಗಿ ಸಚಿವರಿಂದ ಭರವಸೆ ದೊರಕಿದೆ ಎಂದವರು ತಿಳಿಸಿದ್ದಾರೆ.
ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಸೈನ್ಸ್ ವಿಭಾಗದ ಅನುಕೂಲತೆ ಮಾಡುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ನನಗೆ ಮನವಿ ಮಾಡಿದ್ದರು. ಈ ಕಾಲೇಜಿಗೆ ಹೆಚ್ಚಾಗಿ ಬರುವುದು ಬಡವರ್ಗದ ಮಕ್ಕಳು. ಅವರ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಮಾಡಿಕೊಡುವುದು ನನ್ನ ಜವಾಬ್ದಾರಿಯಾಗಿದೆ. ಇಲ್ಲಿ ವಿಜ್ಞಾನ ವಿಭಾಗ ಪ್ರಾರಂಭಕ್ಕೆ ಅನುಮತಿ ಸಿಕ್ಕಿರುವುದು ಸಂತೋಷವಾಗಿದೆ- ಅಶೋಕ್ ರೈ ಶಾಸಕರು ಪುತ್ತೂರು





























