
ಪುತ್ತೂರು; ನಾಯಕತ್ವದ ಮೊದಲ ಕರ್ತವ್ಯವೆಂದರೆ ತನ್ನನ್ನೇ ತಾನು ಪ್ರಭಾವಿಸಿಕೊಳ್ಳುವುದಾಗಿದೆ. ಬಳಿಕ ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅದೇ ವೇಳೆ ಇತರರಿಂದ ಪ್ರಭಾವಿತರಾಗಲು ಸಹ ನಾಯಕ ಸಿದ್ಧನಿರಬೇಕು. ಒಬ್ಬ ಉತ್ತಮ ನಾಯಕನು ಉತ್ತಮ ಅನುಯಾಯಿಯೂ ಆಗಿರುತ್ತಾನೆ ಎಂದು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಹೆಚ್. ಮಾಧವ ಭಟ್ ಹೇಳಿದರು.
ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ೨೦೨೬-೨೭ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾಯಕನಿಗೆ ಯಾವುದು ಸರಿ ಎಂಬುದರ ಅರಿವು ಇರಬೇಕು. ‘ನಮ್ಮ ಮನೆ’ ಎನ್ನುವುದು ನಮ್ಮ ಮನಸ್ಸಿನಲ್ಲೇ ಇದೆ. ಆದ್ದರಿಂದ ನಾಯಕರು ಸಮನ್ವಯತೆ ಮತ್ತು ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕ್ರಾಂತಿಯನ್ನು ತರಲು ಪ್ರಯತ್ನಿಸುವ ಬದಲು ವಿಕಾಸ ಹಾಗೂ ಸತತ ಬೆಳವಣಿಗೆಯನ್ನು ನಂಬಬೇಕು. ಜೀವನವು ಸಣ್ಣ ಸಣ್ಣ ಸಂಗತಿಗಳಿಂದ ರೂಪುಗೊಂಡಿದ್ದು, ಸಾವಿರ ಮೈಲುಗಳ ಸುದೀರ್ಘ ಪ್ರಯಾಣವೂ ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಸಂಬಂಧಗಳು ಹಾಗೂ ಪರಸ್ಪರ ಸಂವಹನಗಳು ಷರತ್ತುಗಳು, ಆಕರ್ಷಣೆ ಮತ್ತು ಅಗತ್ಯಗಳನ್ನು ಆಧರಿಸುತ್ತಿವೆ. ನಾಯಕರು ತಮ್ಮ ಅನುಯಾಯಿಗಳೊಂದಿಗಿನ ಸಂವಹನಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ವಾರ್ಥಿಗಳಾಗಿದ್ದರೆ ಎಂದಿಗೂ ಉತ್ತಮ ನಾಯಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ರೋಷನ್ ಲಾಸ್ರದೋ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ನಾಕ್ ಕಡಬ, ವಾಣಿಜ್ಯ ಆಡಳಿತ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ಪರ್ಲ್ ಫಿಯೋನಾ ಪಿರೇರಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೃತೀಯ ಬಿ.ಕಾಂ. ವಿದ್ಯಾರ್ಥಿ ಜಯಕೃಷ್ಣ ಇ. ಅವರು ಉದ್ಘಾಟಕರನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ತೃತೀಯ ಬಿ.ಬಿ.ಎ. ವಿದ್ಯಾರ್ಥಿ ಲಿಖಿತ್ ಜೆ.ಡಿ. ಅವರು ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ನಿಶ್ಮಿತಾ ರೈ ವಂದಿಸಿ, ತೃತೀಯ ಬಿ.ಬಿ.ಎ. ವಿದ್ಯಾರ್ಥಿನಿ ಪ್ರಿಯಾ ಎಂ.ಕೆ. ನಿರೂಪಿಸಿದರು.


































