
ಸಂಜೆವಾಣಿ ವಾರ್ತೆ
ಕುರುಗೋಡು, ಮೇ.27 ವರ್ಷದ ಯುವಕನಾಗಿದ್ದಾಗ ಕಣ್ಮರೆಯಾಗಿದ್ದ ಶಂಕರ ಆಚಾರಿ 20 ವರ್ಷಗಳ ನಂತರ ಖಾವಿಧರಿಸಿ ರಾಜನ್ ಪುರಿ ಮಹಾರಾಜನಾಗಿ ಮನೆಗೆ ಭೇಟಿ ನೀಡಿ ಹೆತ್ತವರಲ್ಲಿ ಅಚ್ಚರಿ ಮೂಡಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ಜರುಗಿತು.
ಕುರುಗೋಡಿನ ಚಂದ್ರಶೇಖರಾಚಾರಿ ಮತ್ತು ಚಂದ್ರಕಲಾ ದಂಪತಿಗಳ ಏಕೈಕ ಪುತ್ರ ಶಂಕರ ಆಚಾರಿ ಅವರು 20 ವರ್ಷಗಳ ನಂತರ ಮನೆಗೆ ಮರಳಿದ್ದಾರೆ. ಮಗನನ್ನು ಕಂಡ ತಂದೆ ತಾಯಿಯ ಕಣ್ಣಾಲೆಗಳು ಒದ್ದೆಯಾದವು.
ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ದುಡಿಯಲು ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ಮುಂಬೈಗೆ ತೆರಳಿ ಕುಟುಂಬದ ಸಂಪರ್ಕವಿಲ್ಲದೆ ನೆಲೆಸಿದ್ದರು. ನಂತರ ಹರಿದ್ವಾರದಲ್ಲಿ 7 ವರ್ಷ ನೆಲೆಸಿ ನಿರಂಜನ್ದೇವ್ ಎಂಬ ಗುರುಗಳಿಂದ ಧೀಕ್ಷೆ ಪಡೆದಿದ್ದಾರೆ.
‘ಫೇಸ್ಬುಕ್ನಲ್ಲಿ ಪರಿಚಯವಾದ ಕುರುಗೋಡಿನ ನಿವಾಸಿ ಬಸವರಾಜ ಕುಂಬಾರು ಅವರ ಸಹಾಯದಿಂದ ಕುಟುಂಬಸ್ಥರು ಭೇಟಿ ಮಾಡಿದ್ದೇನೆ. ಹಿಂದೂ ಸನಾತನ ಧರ್ಮದಲ್ಲಿ ಕುಲದೇವರ ದರ್ಶನ ಪಡೆಯಲು ಅವಕಾಶ ವಿದೆ. ಇಲ್ಲಿರುವ ಕಾಳಿಕಾದೇವಿಯ ದರ್ಶನ ಪಡೆದಿದ್ದೇನೆ’ ಎಂದು ಶಂಕರ ಆಚಾರಿ ತಿಳಿಸಿದರು.























