ಉಡುಪಿ-ಪೇಜಾವರ ಮಠದ ಅಧೀನದಲ್ಲಿರುವ ನೀಲಾವರ ಗೋಶಾಲೆಗೆ ಸಂಬಂಧಿಸಿದ ಗೋವರ್ಧನಗಿರಿ ಟ್ರಸ್ಟ್‌ನ ಸದಸ್ಯರೊಬ್ಬರು ಗೋಶಾಲೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಅನಧಿಕೃತವಾಗಿ ದೇಣಿಗೆ ಸಂಗ್ರಹಿಸಿರುವ ಆರೋಪ ಬೆಳಕಿಗೆ ಬಂದಿದೆ.
ಉಡುಪಿ ಭಾರತೀಶ್ ಜುವೆಲ್ಲರ್ಸ್‌ನ ಶಶಿಧರ್ ಭಟ್ ಅವರು “ನೀಲಾವರ ಗೋಗ್ರಾಸ ಸೇವಾ ತಂಡ” ಎಂಬ ಹೆಸರಿನಲ್ಲಿ ತಂಡವೊಂದನ್ನು ರಚಿಸಿ, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ ಮಾಹಿತಿ ಟ್ರಸ್ಟ್‌ಗೆ ಲಭ್ಯವಾಗಿದೆ.
ಪೇಜಾವರ ಶ್ರೀಗಳು ಹಾಗೂ ಗೋವರ್ಧನಗಿರಿ ಟ್ರಸ್ಟ್‌ನ ಪೂರ್ವಾನುಮತಿ ಅಥವಾ ಗಮನಕ್ಕೆ ತರದೇ, ಅನಧಿಕೃತವಾಗಿ ಪೇಜಾವರ ಮಠದ ಹೆಸರು ಹಾಗೂ ಶ್ರೀಗಳ ಭಾವಚಿತ್ರವನ್ನು ಮನವಿಪತ್ರಗಳಲ್ಲಿ ಬಳಸಿಕೊಂಡು ದೇಣಿಗೆ ಸಂಗ್ರಹ ನಡೆಸಿರುವುದಾಗಿ ಟ್ರಸ್ಟ್ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಶಶಿಧರ್ ಭಟ್ ಅವರನ್ನು ತಕ್ಷಣದಿಂದಲೇ ಗೋವರ್ಧನಗಿರಿ ಟ್ರಸ್ಟ್ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ. ಇನ್ನು ಮುಂದೆ ಅವರಿಗೆ ನೀಲಾವರ ಗೋಶಾಲೆ ಅಥವಾ ಗೋಶಾಲೆಗೆ ಸಂಬಂಧಿಸಿದ ಯಾವುದೇ ತಂಡದೊಂದಿಗೆ ಯಾವುದೇ ಅಧಿಕೃತ ಸಂಬಂಧ ಇರುವುದಿಲ್ಲ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.
ಸಾರ್ವಜನಿಕರು ಇಂತಹ ಅನಧಿಕೃತ ದೇಣಿಗೆ ಸಂಗ್ರಹಕ್ಕೆ ಮೋಸಹೋಗಬಾರದು. ನೀಲಾವರ ಗೋಶಾಲೆಗೆ ದೇಣಿಗೆ ನೀಡುವವರು ಗೋವರ್ಧನಗಿರಿ ಟ್ರಸ್ಟ್ ನೀಡುವ ಅಧಿಕೃತ ರಶೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಟ್ರಸ್ಟ್‌ನ ವಿಶ್ವಸ್ಥ ಲಕ್ಷ್ಮೀನಾರಾಯಣ ರಾವ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


































