
ಸೆಪ್ಟೆಂಬರ್ 6ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಅದ್ಧೂರಿ ಆರಂಭ
ಕಿರುತೆರೆಯ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ ‘ಬಿಗ್ ಬಾಸ್ ಕನ್ನಡ’ 13ನೇ ಆವೃತ್ತಿಗೆ ಸಜ್ಜಾಗಿದೆ. ‘ಫ್ಲೈಟ್’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ ಬಾರಿಯ ಕಾರ್ಯಕ್ರಮದ ಅದ್ಧೂರಿ ಆರಂಭ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ.
12 ಯಶಸ್ವಿ ಆವೃತ್ತಿಗಳ ಬಳಿಕ ಬರುತ್ತಿರುವ ಸೀಸನ್ 13ರಲ್ಲಿ ಚಿತ್ರರಂಗ, ಕಿರುತೆರೆ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಚಿತ ಮುಖಗಳ ಜತೆಗೆ ಸಾಮಾನ್ಯ ಜನರಿಗೂ ದೊಡ್ಮನೆ ಪ್ರವೇಶಿಸುವ ಅವಕಾಶ ದೊರೆತಿದೆ. ಹೊಸ ಸ್ಪರ್ಧಿಗಳು, ವಿಭಿನ್ನ ಆಟಗಳು, ಸವಾಲುಗಳು ಹಾಗೂ ಅನಿರೀಕ್ಷಿತ ತಿರುವುಗಳು ಈ ಆವೃತ್ತಿಯ ಪ್ರಮುಖ ಆಕರ್ಷಣೆಯಾಗಿವೆ.
ಕಾರ್ಯಕ್ರಮದ ಆರಂಭದಿಂದಲೂ ನಿರೂಪಣೆಯ ಹೊಣೆ ಹೊತ್ತಿರುವ ಕಿಚ್ಚ ಸುದೀಪ್ ಮತ್ತೊಮ್ಮೆ ದೊಡ್ಮನೆಯ ಸಾರಥಿಯಾಗಿದ್ದಾರೆ. ತಮ್ಮದೇ ಆದ ನಿರೂಪಣಾ ಶೈಲಿ, ಸ್ಪರ್ಧಿಗಳೊಂದಿಗೆ ನಡೆಸುವ ಸಂಭಾಷಣೆ ಹಾಗೂ ಸಮಯೋಚಿತ ಮಾತುಗಳ ಮೂಲಕ ಸುದೀಪ್, ‘ಬಿಗ್ ಬಾಸ್ ಕನ್ನಡ’ದ ಅವಿಭಾಜ್ಯ ಅಂಗವಾಗಿದ್ದಾರೆ.
ಈ ಬಾರಿ ಕಾರ್ಯಕ್ರಮದ ಅನುಭವ ಕಿರುತೆರೆಗೆ ಮಾತ್ರ ಸೀಮಿತವಾಗಿಲ್ಲ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಮನೆ 24 ಗಂಟೆಯೂ ವೀಕ್ಷಣೆಗೆ ಲಭ್ಯವಾಗಲಿದೆ. ಮನೆಯೊಳಗಿನ ಮಾತುಕತೆಗಳು, ಸ್ಪರ್ಧಿಗಳ ನಡುವಿನ ಸಂಬಂಧಗಳ ಬದಲಾವಣೆ, ಅನಿರೀಕ್ಷಿತ ಘಟನೆಗಳು ಹಾಗೂ ಹಲವು ಕುತೂಹಲಕಾರಿ ಕ್ಷಣಗಳನ್ನು ವೀಕ್ಷಕರು ಯಾವಾಗ ಬೇಕಾದರೂ ನೋಡಬಹುದಾಗಿದೆ.
ದಕ್ಷಿಣ ವಲಯದ ಮನರಂಜನಾ ವ್ಯವಹಾರಗಳ ಮುಖ್ಯಸ್ಥ ಕೃಷ್ಣನ್ ಕುಟ್ಟಿ ಮಾತನಾಡಿ, ಕರ್ನಾಟಕದಲ್ಲಿ ‘ಬಿಗ್ ಬಾಸ್’ ಕೇವಲ ಒಂದು ದೂರದರ್ಶನ ಕಾರ್ಯಕ್ರಮವಾಗಿ ಉಳಿದಿಲ್ಲ. ಪ್ರತಿ ಆವೃತ್ತಿಯೂ ಜನರ ಚರ್ಚೆಯ ಭಾಗವಾಗುತ್ತಿದೆ. ಕಿಚ್ಚ ಸುದೀಪ್ ಅವರ ವಿಶಿಷ್ಟ ನಿರೂಪಣೆ ಈ ಪಯಣದ ಪ್ರಮುಖ ಶಕ್ತಿಯಾಗಿದ್ದು, 13ನೇ ಆವೃತ್ತಿಯನ್ನೂ ಪ್ರೇಕ್ಷಕರಿಗೆ ಮರೆಯಲಾಗದ ಅನುಭವವಾಗಿಸುವ ಉದ್ದೇಶವಿದೆ ಎಂದರು.
ಬನಿಜಯ್ ಏಷ್ಯಾ ಮತ್ತು ಎಂಡೆಮೋಲ್ ಶೈನ್ ಇಂಡಿಯಾ ಸಂಸ್ಥೆಗಳ ಸಮೂಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್ ಧರ್ ಮಾತನಾಡಿ, ಕಳೆದ 12 ಆವೃತ್ತಿಗಳಲ್ಲಿ ‘ಬಿಗ್ ಬಾಸ್ ಕನ್ನಡ’ ಸಾಂಸ್ಕೃತಿಕ ವಿದ್ಯಮಾನವಾಗಿ ಬೆಳೆದಿದೆ. 13ನೇ ಆವೃತ್ತಿಯಲ್ಲಿ ಕಿಚ್ಚ ಸುದೀಪ್ ಅವರ ನಿರೂಪಣೆ ಮತ್ತು ಜಿಯೋ ಹಾಟ್‌ಸ್ಟಾರ್‌ನ 24 ಗಂಟೆಗಳ ವೀಕ್ಷಣಾ ಅನುಭವವನ್ನು ಒಟ್ಟುಗೂಡಿಸಿ ಕಾರ್ಯಕ್ರಮವನ್ನು ಮತ್ತಷ್ಟು ರೋಚಕವಾಗಿಸಲಾಗುತ್ತಿದೆ ಎಂದು ತಿಳಿಸಿದರು.
‘ಬಿಗ್ ಬಾಸ್ ಕನ್ನಡ ಸೀಸನ್ 13’ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಆರಂಭವಾಗಲಿದೆ. ಬಳಿಕ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಹಾಗೂ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ದೊಡ್ಮನೆಯೊಳಗಿನ ಪ್ರತಿಯೊಂದು ಕ್ಷಣವೂ ಜಿಯೋ ಹಾಟ್‌ಸ್ಟಾರ್‌ನಲ್ಲಿ 24 ಗಂಟೆಯೂ ವೀಕ್ಷಣೆಗೆ ಲಭ್ಯ.






























