Home ಜಿಲ್ಲೆ ಸೃಜನಶೀಲತೆ ಉಳಿಸಿ ಬೆಳೆಸುವುದು ಇಂದಿನ ಅಗತ್ಯ: ಸಿದ್ದರಾಮ ಕಲ್ಮಠ

ಸೃಜನಶೀಲತೆ ಉಳಿಸಿ ಬೆಳೆಸುವುದು ಇಂದಿನ ಅಗತ್ಯ: ಸಿದ್ದರಾಮ ಕಲ್ಮಠ

ಸಂಜೆವಾಣಿ ವಾರ್ತೆ

ಬಳ್ಳಾರಿ, ಸೆ. 27: ಮನದ ಭಾವನೆಗಳನ್ನು ಅಭಿವ್ಯಕ್ತಿಪಡಿಸುವ ಅತ್ಯಂತ ಪರಿಣಾಮಕಾರಿ ಮಾಧ್ಯಮವೇ ಕಲೆ. ಸಂಗೀತ, ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಮನುಷ್ಯನ ಭಾವನೆ, ಅನುಭವ, ಚಿಂತನೆ ಹಾಗೂ ಬದುಕಿನ ಸೌಂದರ್ಯ ಪ್ರಸ್ತುತಗೊಳ್ಳುತ್ತದೆ. ಕಲೆ ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜದ ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಸಾಧನವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

ನಗರದ ಗುಗ್ಗರಹಟ್ಟಿಯಲ್ಲಿರುವ ಶ್ರೀ ಶ್ರೀ ಶ್ರೀ ಭ್ರಮಾರಾಂಭ ಮಲ್ಲಿಕಾರ್ಜುಜನ ಸ್ವಾಮಿ ಶಿವ ದೀಕ್ಷಾ ಮಂದಿರ ಟ್ರಸ್ಟ್‍ನಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ  ಕಲಾ ತಂಡದ ವತಿಯಿಂದ ಆಯೋಜಿಸಿದ್ದ “ಚಂದ್ರಮ ಕಲಾ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವೇಗದ ಬದುಕಿನಲ್ಲಿ ಸೃಜನಶೀಲತೆಗೆ ಹೆಚ್ಚಿನ ಅವಕಾಶ ದೊರೆಯದಿರುವುದು ವಿಷಾದಕರ. ತಕ್ಷಣವೇ ಜನಪ್ರಿಯತೆ ಗಳಿಸಬೇಕು ಎಂಬ ಉದ್ದೇಶದಿಂದ ಕೃತಕ ಅಭಿವ್ಯಕ್ತಿಗಳು ಹಾಗೂ ಅನ್ಯ ಮಾರ್ಗಗಳನ್ನು ಅವಲಂಬಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ನಿಜವಾದ ಕಲಾವಿದನ ಸೃಜನಶೀಲತೆ, ಪರಿಶ್ರಮ ಮತ್ತು ಪ್ರತಿಭೆಗೆ ಸೂಕ್ತ ವೇದಿಕೆ ದೊರೆತಾಗ ಮಾತ್ರ ಕಲೆ ಸಮೃದ್ಧವಾಗಿ ಬೆಳೆಯಲು ಸಾಧ್ಯ. ಸ್ಥಳೀಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಸಮಾಜ ಮತ್ತು ಸಂಘ-ಸಂಸ್ಥೆಗಳ ಮೇಲಿದೆ ಎಂದು ಅವರು ಹೇಳಿದರು.

ಕಲಾ ಕಾರ್ಯಕ್ರಮಗಳು ಯುವಜನರಲ್ಲಿ ಸೃಜನಶೀಲ ಚಿಂತನೆ, ಆತ್ಮವಿಶ್ವಾಸ ಮತ್ತು ನಮ್ಮ ನೆಲದ ಸಂಸ್ಕೃತಿಯ ಬಗ್ಗೆ ಅಭಿಮಾನವನ್ನು ಬೆಳೆಸುತ್ತವೆ. ವಿಶೇಷವಾಗಿ ತೊಗಲುಗೊಂಬೆಯಾಟ, ಜಾನಪದ ಕಲೆ, ರಂಗಗೀತೆ, ನೃತ್ಯ ಮುಂತಾದ ಕಲೆಗಳನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನ ಅಗತ್ಯ. ಕಲಾವಿದರಿಗೆ ಪ್ರೋತ್ಸಾಹ ಮತ್ತು ಪ್ರೇಕ್ಷಕರ ಮೆಚ್ಚುಗೆ ದೊರೆತರೆ ನಮ್ಮ ಸಾಂಸ್ಕೃತಿಕ ಪರಂಪರೆ ಇನ್ನಷ್ಟು ಜೀವಂತವಾಗಿರುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ರೌಡಕುಂದದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಕನ್ನಡ ನಾಡಿನ ಅರಸರು ಹಿಂದಿನಿಂದಲೂ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಮ್ಮ ನಾಡಿನ ಪರಂಪರೆಯನ್ನು ಜೀವಂತವಾಗಿರಿಸುವಲ್ಲಿ ಮಠಮಾನ್ಯಗಳ ಪಾತ್ರವೂ ಮಹತ್ವದ್ದಾಗಿದೆ. ಮಠಗಳು ಮತ್ತು ವಿವಿಧ ಸಂಘ-ಸಂಸ್ಥೆಗಳು ಕನ್ನಡ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯವನ್ನು ಜನರಿಗೆ ಪರಿಚಯಿಸುವ ಕಾರ್ಯ ಮಾಡುತ್ತಿವೆ. ಕಲಾವಿದರಿಗೆ ಸಮಾಜದಲ್ಲಿ ಸೂಕ್ತ ಮಾನ್ಯತೆ ಮತ್ತು ಗೌರವ ದೊರೆತಾಗ ಮಾತ್ರ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತಷ್ಟು ವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಗಿರಿಜಾಪತಿ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಗಡಿಭಾಗದಲ್ಲಿಯೂ ಅಸಾಧಾರಣ ಪ್ರತಿಭೆ ಹೊಂದಿರುವ ಅನೇಕ ಕಲಾವಿದರಿದ್ದು, ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡುವ ಅಗತ್ಯವಿದೆ. ಸರ್ಕಾರವು ಗಡಿ ಪ್ರದೇಶದ ಕಲಾವಿದರನ್ನು ಗುರುತಿಸಿ, ಅವರ ಕಲಾ ಪ್ರತಿಭೆಗೆ ಅನುಗುಣವಾಗಿ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶಗಳನ್ನು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಾವಿದರು ತಮ್ಮ ಪ್ರತಿಭೆಯನ್ನು ವಿವಿಧ ಕಲಾ ಪ್ರಕಾರಗಳ ಮೂಲಕ ಅನಾವರಣಗೊಳಿಸಿದರು. ಭರತನಾಟ್ಯ, ರಂಗಗೀತೆ ಹಾಗೂ ಜಾನಪದ ಗೀತೆಗಳ ಪ್ರಸ್ತುತಿಗಳು ಪ್ರೇಕ್ಷಕರ ಗಮನ ಸೆಳೆದವು. ಕಲಾವಿದರ ಕಲಾ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ವೇದಿಕೆಯಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷರಾದ ಕೆ. ಹೊನ್ನೂರಸ್ವಾಮಿ, ಪ್ರಸ್ತಾವಿಕವಾಗಿ ಮಾತನಾಡಿದರು, ರಂಗ ಕಲಾವಿದೆ ಶ್ರೀಮತಿ ರೇಣುಕಾ ಬಾವಳ್ಳಿ ರಂಗ ಗೀತೆ ಹಾಡಿದರು, ಶಿವಕುಮಾರ್ .ಕೆ.ಜಿ. ವಚನ ಗಾಯನ ಹಾಡಿದರು, ಶ್ರೀ ಯೋಗೇಶ್ ತಬಲ ಸತ್ ನುಡಿಸಿದರು, ಯುಗಳ ನೃತ್ಯ ಕು. ಹರಿಪ್ರೀಯ. ಕು. ಹಾರಿಕ .ಎಸ್.ಎಂ., ಕು. ಹರ್ಷಿತ ಮಠ್, ಶ್ರೀ ಶ್ರೀ ಶ್ರೀ ಭ್ರಮಾರಾಂಭ ಮಲ್ಲಿಕಾರ್ಜುಜನ ಸ್ವಾಮಿ ಶಿವ ದೀಕ್ಷಾ ಮಂದಿರ ಟ್ರಸ್ಟ್‍ನ ಕೆ. ರಾಜಶೇಖರ ಗೌಡ, ಕುರುಗೋಡು ಬಸಾಪುರದ ಶಾಲೆಯ ಬಡ್ತಿ ಮುಖ್ಯೋಪಾಧ್ಯಾಯ ಎಚ್.ಕೆ. ತಿಪ್ಪೇಸ್ವಾಮಿ, ರಂಗಭೂಮಿ ಕಲಾವಿದೆ  ಶ್ರೀಮತಿ ಲತಾ, ಸೇರಿದಂತೆ ಗಣ್ಯರು, ಕಲಾವಿದರು ಹಾಗೂ ಕಲಾಸಕ್ತರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಲಕ್ಷ್ಮಿದೇವಿ ವಂದಿಸಿದರು, ಎಂ.ಎನ್. ಕೊಟ್ರೇಶ್ ಕಾರ್ಯಕ್ರಮ ನಿರೂಪಿಸಿದರು.