
ಸಂಜೆವಾಣಿ ವಾರ್ತೆ
ಹೊಸಪೇಟೆ.ಸೆ.27 ಸ್ಥಳೀಯ ಶ್ರೀ ಸಸ್ಯ ಶಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ.
ನಗರದ ಬಳ್ಳಾರಿ ರಸ್ತೆಯಲ್ಲಿ ಸ್ಥಾಪಿಸಲಾದ ಹಿಂದೂ ಮಹಾಗಣಪತಿ ವೇದಿಕೆ ಬಳಿ ಶ್ರೀ ಸಸ್ಯ ಶಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಕಾಮಟಗಿ, ಇಂದಿನ ಅತ್ಯಾಧುನಿಕ ಯುಗದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಅತ್ಯಂತ ವಿರಳ. ಈ ನಿಟ್ಟಿನಲ್ಲಿ ಶ್ರೀಸಸ್ಯ ಶ್ಯಾಮಲ ಸಂರಕ್ಷಣಾ ಸೇವಾ ಟ್ರಸ್ಟ್ ಉತ್ತಮ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಪಂಚಕ್ಕೆ ಪರಿಸರ ಎಷ್ಟು ಪ್ರಾಮುಖ್ಯತೆ ಎಂದು ತಿಳಿಸುವುದರ ಜೊತೆಗೆ ಇಂದಿನ ಅತ್ಯಾಧುüನಿಕ ಯುಗದ ನಾಗಾಲೋಟದಲ್ಲಿ ಭೂ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಮುಂತಾದವುಗಳು ವಿಪರೀತವಾಗಿ ಹೆಚ್ಚಾಗುತ್ತಿವೆ. ಅದೇ ರೀತಿ ಜಾಗತಿಕ ತಾಪಮಾನವು ತುಂಬಾ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಬಹಳ ಜನರು ಮುಂದೆ ಬಂದು ಸಸಿಗಳನ್ನು ನೆಡಬೇಕು. ಹಾಗೂ ಹಿಂದೂ ಮಹಾಗಣಪತಿ ಉತ್ಸವದ ಬಳಿ ಸಸಿಗಳನ್ನು ವಿತರಿಸಲು ಸಹಕರಿಸಿದ್ದಕ್ಕಾಗಿ ಶ್ರೀ ಸಸ್ಯ ಶ್ಯಾಮಲ ಸಂರಕ್ಷಣಾ ಸೇವಾ ಟ್ರಸ್ಟ್ ಗೆ ಅಭಿನಂದನೆಗಳು ಎಂದರು.
ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್ ನ ಅಧ್ಯಕ್ಷ ವಿ. ನಾಗರಾಜ ಮಾತನಾಡಿ, ಪರಿಸರ ಜಾಗೃತಿ ಮೂಡಿಸುವುದು ಕೇವಲ ಒಂದು ಟ್ರಸ್ಟ್ ನಿಂದ ಅಥವಾ ಒಂದು ಸಂಸ್ಥೆಯಿಂದ ಸಾಧ್ಯವಿಲ್ಲ. ವರ್ಷಪೂರ್ತಿ ಹೊಸಪೇಟೆ ನಗರದಲ್ಲಿ ಜಯಂತಿ, ಜಾತ್ರೆಗಳು, ಉತ್ಸವಗಳು ನಡೆಯುತ್ತಲೇ ಇರುತ್ತವೆ. ಇಂತಹ ಜಾತ್ರೆ , ಉತ್ಸವ, ಜಯಂತಿಗಳ ಆಚರಣಾ ಸಮಿತಿಗಳಿಗೆ ಜಿಲ್ಲಾಡಳಿತ ಹಾಗೂ ಸರಕಾರಗಳು ಸಸಿಗಳನ್ನು ನೆಡುವಂತೆ ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿದಾಗ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದರು. ಸಾರ್ವಜನಿಕರು ಕೂಡ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ ಸಸಿಗಳನ್ನು ಸ್ವಯಂ ಪ್ರೇರಿತವಾಗಿ ನೀಡಲು ಮುಂದೆ ಬರಬೇಕೆಂದು ಕರೆ ನೀಡಿದರು.
ಟ್ರಸ್ಟ್ ನ ಉಪಾಧ್ಯಕ್ಷ ಎ.ಗೋವಿಂದ ಮಾತನಾಡಿ, ಇಂದು ಶುದ್ಧ ಕುಡಿಯುವ ನೀರಿಗಾಗಿ ಹಲವಾರು ರೀತಿಯ ಪ್ಯೂರಿಫೈಯರ್ ಗಳಿಗೆ ವಿಪರೀತವಾಗಿ ಹಣವನ್ನು ವೆಚ್ಚ ಮಾಡುತ್ತಿದ್ದೇವೆ. ಇದೇ ರೀತಿ ಮುಂದೊಂದು ದಿನ ಶುದ್ಧ ಗಾಳಿಗಾಗಿ ಹಣ ನೀಡುವಂತಹ ಸನ್ನಿವೇಶ ಬಂದರೆ ಬಡವರ ಹಾಗೂ ಸಾಮಾನ್ಯ ವರ್ಗದವರ ಜೀವನವೇ ಅಂತ್ಯವಾಗುವ ದಿನಗಳು ಬರುತ್ತವೆ. ಕೇವಲ ಮನುಷ್ಯರಷ್ಟೇ ಅಲ್ಲ ಇಡೀ ಜೀವ ವೈವಿಧ್ಯಮದಲ್ಲಿ ಇರುವ ಮೂಕ ಪ್ರಾಣಿ ಪಕ್ಷಿ ಹಾಗೂ ಇಡೀ ಜೀವಸಂಕುಲ ನಾಶವಾಗುವ ಸಂಭವ ಇದೆ ಎಂದು ಕಳವಳ ವ್ಯಕ್ತಪಡಿಸಿದರು..
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಪ್ರಭಾಕರ್, ವಾಹಿನಿ ಅಭಿವೃದ್ಧಿ ಸಂಸ್ಥೆಯ ಶಿವಕುಮಾರ್, ಜಂಬಯ್ಯ, ಬಿ.ರಮೇಶ್, ರಾಜೇಶ್, ವಿ.ಎನ್ ಹುಲುಗಪ್ಪ ಶಶಿಕುಮಾರ್ ಸೇರಿದಂತೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.























