
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.01: ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ತನ್ನನ್ನು ಬದಲಿಸಿಕೊಂಡು, ಅವರಲ್ಲಿ ಚಿಂತನೆ, ಸೃಜನಶೀಲತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವವನೇ ನಿಜವಾದ ಗುರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಹೇಳಿದರು.
ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸಂಘದ ಶಾಲಾ-ಕಾಲೇಜುಗಳ ನಿವೃತ್ತ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಸನ್ಮಾನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ. ಎ.ಎಂ. ಕಾಳಮ್ಮ ಉದ್ಘಾಟಿಸಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ವೀ.ವಿ. ಸಂಘದ ಗಂಧರ್ವ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಉದ್ಘಾಟನಾ ನುಡಿಯಲ್ಲಿ ಡಾ. ಎ.ಎಂ. ಕಾಳಮ್ಮ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ಗೌರವಿಸುವುದು ಸಮಾಜದ ಮಹತ್ವದ ಜವಾಬ್ದಾರಿಯಾಗಿದೆ. ಒಬ್ಬ ಶಿಕ್ಷಕ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಬಲ್ಲ. ಅವರಿಂದ ರೂಪುಗೊಂಡ ವಿದ್ಯಾರ್ಥಿಗಳೇ ಮುಂದೆ ಸಮಾಜದ ನಿರ್ಮಾತೃಗಳಾಗುತ್ತಾರೆ. ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿದ್ದರೂ ಗುರು-ಶಿಷ್ಯರ ನಡುವಿನ ಭಾವನಾತ್ಮಕ ಸಂಬಂಧವನ್ನು ಅವುಗಳಿಂದ ನಿರ್ಮಿಸಲು ಸಾಧ್ಯವಿಲ್ಲ ಎಂದರು. ನಿವೃತ್ತ ಶಿಕ್ಷಕರು ಸಂಸ್ಥೆಯ ಆವರಣದಿಂದ ದೂರವಾಗಿದ್ದರೂ, ಅವರು ಬಿತ್ತಿದ ಜ್ಞಾನ ಮತ್ತು ಮೌಲ್ಯಗಳ ಬೀಜಗಳು ವಿದ್ಯಾರ್ಥಿಗಳ ಬದುಕಿನಲ್ಲಿ ನಿರಂತರವಾಗಿ ಫಲ ನೀಡುತ್ತಲೇ ಇರುತ್ತವೆ ಎಂದು ಹೇಳಿದರು.
ವೀ.ವಿ. ಸಂಘದ ಕಾರ್ಯದರ್ಶಿಗಳಾದ ಡಾ|| ಅರವಿಂದ ಪಟೇಲ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೀ.ವಿ. ಸಂಘದ ಕೋಶಾಧಿಕಾರಿಗಳಾದಶ್ರೀ ಬೈಲುವದ್ದಿಗೇರಿ ಎರ್ರಿಸ್ವಾಮಿ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 2025ರಿಂದ ಆಗಸ್ಟ್ 31, 2026ರವರೆಗೆ ನಿವೃತ್ತರಾದ 17 ಶಿಕ್ಷಕರನ್ನು ವೀ.ವಿ.ಸಂಘದ ವತಿಯಿಂದ ಸನ್ಮಾನಿಸಲಾಗುತ್ತಿದೆ. ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ನೀಡಲಾಗಿರುವ ವಿಶಿಷ್ಟ ಸ್ಥಾನವನ್ನು ಸ್ಮರಿಸಿದ ಅವರು, ನಿವೃತ್ತ ಶಿಕ್ಷಕರ ಸೇವೆಯನ್ನು ವೀರಶೈವ ವಿದ್ಯಾವರ್ಧಕ ಸಂಘ ಸದಾ ಗೌರವದಿಂದ ಸ್ಮರಿಸುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಗುರುಮುಟ್ಟಿದವರು ಗುರುಗಳಾಗಿ ದೀಪದಿಂದ ದೀಪ ಬೆಳಗುವಂತೆ ಸಮಾಜವನ್ನು ಬೆಳಗಿಸಬೇಕು. ಕಾಲ ಬದಲಾದಂತೆ ಶಿಕ್ಷಕರು ತಮ್ಮ ಬೋಧನಾ ವಿಧಾನಗಳಲ್ಲಿಯೂ ಬದಲಾವಣೆ ತಂದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಕೇವಲ ಪಠ್ಯಜ್ಞಾನ ನೀಡುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ; ಭವಿಷ್ಯದ ಬದುಕನ್ನು ಎದುರಿಸುವ ಸಾಮಥ್ರ್ಯ, ಸೃಜನಶೀಲತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣದ ಉದ್ದೇಶವಾಗಬೇಕು ಎಂದರು.ಪ್ರಶ್ನಿಸುವ ವಿದ್ಯಾರ್ಥಿಯನ್ನು ಶಿಕ್ಷಕರು ಗೌರವಿಸಬೇಕು. ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಬಾಗುವವನೇ ಉತ್ತಮ ಗುರು. ವಿದ್ಯಾರ್ಥಿಗಳ ಕೈಗೆ ಸಿದ್ಧ ಉತ್ತರಗಳನ್ನು ನೀಡುವ ಬದಲು, ಅವರು ಸ್ವತಂತ್ರವಾಗಿ ಯೋಚಿಸುವ, ಪ್ರಶ್ನಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಅವಕಾಶವನ್ನು ಕಲ್ಪಿಸಬೇಕು. ಸಮಾಜದಲ್ಲಿ ವೈದ್ಯರು ಹಾಗೂ ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಭ್ರಷ್ಟರಾದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು ಎಚ್ಚರಿಸಿದರು.
ನಂತರ ವೀ.ವಿ. ಸಂಘದ ವಿವಿಧ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರು ತಮ್ಮ ದೀರ್ಘಕಾಲದ ಸೇವಾನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀ.ವಿ.ಸಂಘದ ಅಧ್ಯಕ್ಷರಾದ ಡಾ|| ಕಣೇಕಲ್ ಮಹಾಂತೇಶ್ ಅವರುವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಚೋರುನೂರು ಕೊಟ್ರಪ್ಪ ಮಾತನಾಡಿ, ಶಿಕ್ಷಕರು ಸಮಾಜದ ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಮುಖ ಕೊಂಡಿಯಾಗಿದ್ದಾರೆ.“ಶಿಕ್ಷಕ ತನ್ನ ಕರ್ತವ್ಯದಲ್ಲಿ ಸೋತರೆ ದೇಶ ಸೋಲುತ್ತದೆ.” ಆದ್ದರಿಂದ ಶಿಕ್ಷಕರು ತಮ್ಮ ವೃತ್ತಿಯ ಘನತೆ ಹಾಗೂ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು.
ವೀ.ವಿ. ಸಂಘದ ಸಹ ಕಾರ್ಯದರ್ಶಿಗಳಾದ ಶ್ರೀ ಯಾಳ್ಪಿ ಮೇಟಿ ಪಂಪನಗೌಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀ ಮೋಹನರೆಡ್ಡಿ, ಶ್ರೀ ಎಸ್. ಮಲ್ಲನಗೌಡ, ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ, ಶ್ರೀ ಕೆರೇನಳ್ಳಿ ಚಂದ್ರಶೇಖರ, ಶ್ರೀ ಮಿಂಚೇರಿ ನರೇಂದ್ರಬಾಬು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಗಣ್ಯರು, ಉಪನ್ಯಾಸಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಮತಿ ಅಲ್ಲಂ ಸುಮಂಗಳಮ್ಮ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಧೂಪಂ ಸತೀಶ್ ವಂದನಾರ್ಪಣೆ ಸಲ್ಲಿಸಿದರು. ಪ್ರಾಂಶುಪಾಲರುಗಳಾದ ಡಾ.ಬಿ ಗೋವಿಂದರಾಜು ಹಾಗೂ ಡಾ ಸತೀಶ್ ಹಿರೇಮಠ ಅಥಿತಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರಾದ ಡಾ. ಸುವರ್ಣ ಹಾಗೂ ಡಾ. ಹೆಚ್ ಎಂ ಉಮಾ ಕಾರ್ಯಕ್ರಮ ನಿರೂಪಿಸಿದರು.


























