
ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.23 ರಾಜಕಾರಣ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾಜಕಾರಣದಲ್ಲಿ ಸಾಹಿತ್ಯವು ವಿರೋಧ ಪಕ್ಷ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸ್ಥಳೀಯ ಎಸ್.ಯು. ಬಿ.ಎನ್ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕಿಚಿಡಿ ಚನ್ನಪ್ಪ ಹೇಳಿದರು.
ಸ್ಥಳೀಯ ಶ್ರೀಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ “ಸಾಹಿತ್ಯದಲ್ಲಿ ರಾಜಕಾರಣ” ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ರಾಜಕಾರಣ ಹಾಗೂ ಸಾಹಿತ್ಯವು ಒಂದು ನಾಣ್ಯದ ಎರಡು ಮುಖಗಳಿದ್ದಂತಿದ್ದು, ಮಾನವ ನಾಗರಿಕತೆಯ ವಿಕಾಸದ ಹಾದಿಯಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ನಿರ್ಣಾಯಕ ಕ್ಷೇತ್ರಗಳಾಗಿವೆ. ಸಾಹಿತ್ಯವು ಒಂದು ದೇಶದ ಜನಜೀವನದ ಪ್ರತಿಬಿಂಬ, ಒಂದು ಯುಗದ ವಾಣಿ, ಒಂದು ದೇಶದ ಜೀವಿತ ಅವಧಿಯ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಜ್ಞಾನ ವಿಜ್ಞಾನದ ಸಾರಲಾಗಿದೆ. ರಾಜಕಾರಣ ಮತ್ತು ಸಾಹಿತ್ಯ ಪರಂಪರೆ ಇವೆರಡೂ ಒಟ್ಟೊಟ್ಟಿಗೆ ಸಾಗಿದಾಗ ಮಾತ್ರ ಪ್ರಜಾಕಲ್ಯಾಣ ಸಾಧ್ಯವಾಗಲಿದೆ.
ಸಾಹಿತ್ಯವು ಪ್ರಾಚೀನ ಕಾಲದಿಂದಲೂ ರಾಜಸತ್ತೆಯ ಆಶ್ರಯದಲ್ಲಿ ಸಾಹಿತ್ಯ ಬೆಳೆದು ಬಂದಿದೆ. ನಮ್ಮ ದೇಶದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ನೋಡಿದಾಗ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರು ರಾಜಾಶ್ರಯದಿಂದ ದೂರ ಸರಿದು ಮಹಾ ಕಾವ್ಯಗಳನ್ನು ರಚಿಸಿದ್ದಾರೆಂಬುದು ಸ್ಪಷ್ಟವಾಗಿದೆ. ಅಂತೆಯೇ ಈ ಮಹಾಕಾವ್ಯಗಳು ಸರ್ವಕಾಲಕ್ಕೂ ಪ್ರಶಂಸೆಗೆ ಮತ್ತು ವಿಮರ್ಶೆಗೆ ಒಳಪಟ್ಟಿವೆ ಮತ್ತು ಜನ ಜೀವನದ ನಾಡಿ ಮಿಡಿತವಾಗಿ ಚಿತ್ರಗೊಂಡಿವೆ ಎಂದರು.
ರಾಜಕಾರಣ ಮತ್ತು ಜನತೆಗೆ, ರಾಮಾಯಣವು ಏನು ಮಾಡಬೇಕು ಮತ್ತು, ಮಹಾಭಾರತವು ಏನು ಮಾಡಬಾರದು ಎಂಬ ನೀತಿ ಪಾಠಗಳಾಗಿವೆ. ಆದಿಕವಿ ಪಂಪನ ‘ಆದಿಪುರಾಣ’ ಪ್ರೇರಣೆಯಿಂದ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ನಿರ್ಮಾಣವಾಗಿದೆ.
ಭಾರತದ ಸ್ವಾತಂತ್ರ ಹೋರಾಟದಲ್ಲಿ ರವೀಂದ್ರನಾಥ ಠಾಗೂರ್, ಬಂಕಿಮ ಚಂದ್ರ ಚಟರ್ಜಿ ಅವರ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕುವೆಂಪು,ದ.ರಾ. ಬೇಂದ್ರೆ, ಮಂಜೇಶ್ವರ ಗೋವಿಂದ ಪೈ ಹುಯಿಲಗೋಳ ನಾರಾಯಣರಾವ್ ಮುಂತಾದವರ ಕವನಗಳು, ಜನಪದ ಸಾಹಿತ್ಯ ಮೌಖಿಕ ಕಥಾನಕಗಳು ಜನರಲ್ಲಿ ದೇಶಪ್ರೇಮದ ಕಿಚ್ಚು ಹತ್ತಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸ್ಪೂರ್ತಿ ನೀಡಿದವು. ರಾಜಕಾರಣದಲ್ಲಿ ಸಹ ಮತ್ತು ಮಹಾತ್ಮ ಗಾಂಧೀಜಿ ಮತ್ತು ಡಾ.ಅಂಬೇಡ್ಕರ್ ಅವರ ಕೃತಿಗಳು ದೇಶದ ರಾಜಕಾರಣದಲ್ಲಿ ಆಡಳಿತಕ್ಕೆ ಜನತೆಯ ಹಕ್ಕು ಸ್ವಾತಂತ್ರ್ಯಗಳಿಗೆ ದಿಕ್ಸೂಚಿಗಳಾಗಿವೆ.
ಸಾಹಿತ್ಯವು ಪಕ್ಷಪಾತ , ನಿಷ್ಪಕ್ಷಪಾತ ಧೋರಣೆ ಇದ್ದು, ಇದು ಯಾವಾಗಲೂ ಸಾಮಾಜಿಕ ಅಂತರಧ್ವನಿಯಾಗಬೇಕು ಮತ್ತು ರಾಜಕಾರಣವೆಂಬ ಆನೆಗೆ ಸಾಹಿತ್ಯವು ಅಂಕುಶದಂತೆ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಕೃಷಿ ಪಂಡಿತ ಸಾವಯವ ಕೃಷಿಗಾರ ಕಾಮನೂರಿನ ಬಸಪ್ಪ ಅಯ್ಯಪ್ಪ ವಂಕಲಕುಂಟೆ ಅವರು ಮಾತನಾಡಿ, ಸಾವಯವ ಕೃಷಿಯಿಂದ ರೈತ ಹೆಚ್ಚು ಸ್ವಾವಲಂಭಿ ಬೇಸಾಯಗಾರನಾಗಬಲ್ಲನು. ಸಿರಿ ಧಾನ್ಯಗಳು ಸರ್ವ ಪೌಷ್ಠಿಕ ಆಹಾರಾಂಶ ಹೊಂದಿದ್ದು, ನಮ್ಮ ಪರಂಪರಾಗತ ಕೃಷಿಗೇ ರೈತರು ಪುನಃ ತೊಡಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಸಿ. ದೇವಣ್ಣ ಮಾತನಾಡಿ, ಬೌದ್ಧಿಕ ಸಾರಸ್ವತದ ಚಿಂತನೆಗಳು ನಾಡಿಗೆ ಅವಶ್ಯ ಇರಬೇಕು. ಈ ತರಹದ ನಾಡಿನ ಸಾಮಾಜಿಕ ವಿವಿಧ ವಿಷಯಗಳ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಉದ್ದಗಲಕ್ಕೂ ದತ್ತಿ ಉಪನ್ಯಾಸಗಳ ಮೂಲಕ ನಾಡಿನ ಸಾಹಿತ್ತಿಕ ಚಾರಿತ್ರಿಕ ಭವ್ಯತೆಯನ್ನ ಸಾಧರ ಪಡಿಸುತಿದ್ದು, ಇದು ನಾಡ ಹಿರಿಮೆಗೆ ಪೂರಕವೆಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ದತ್ತಿ ದಾನಿಗಳಾದ ಪ್ರೊ. ಲಕ್ಷ್ಮಣ ಕರಿಭೀಮಣ್ಢನವರ್, ಹಾಗೂ ಆಹ್ವಾನಿತರನ್ನ ಸನ್ಮಾನಿಸಲಾಯಿತು. ಕ.ಸಾ.ಪ ತಾಲುಕು ಕಾರ್ಯದರ್ಶಿ ಮುದೇನೂರು ಉಮಾಮಹೇಶ್ವರ ಅವರು ಪರಿಷತ್ತಿನ ಕಾರ್ಯಕಲಾಪ ಕುರಿತು ಪ್ರಸ್ಥಾವನೆ ಮಾಡಿದರು. ಕಾರ್ಯಕ್ರಮದಲ್ಲಿ ಸದಸ್ಯ ಸೋ.ದಾ. ವಿರೂಪಾಕ್ಷಗೌಡ, ಶ್ರವಣ ಇತರರು ಇದ್ದರು.
ವಿಧ್ಯಾರ್ಥಿನಿ ಸುಧಾ ಸಿ. ಪ್ರಾರ್ಥಿಸಿದರು. ಉಪನ್ಯಾಸಕಿ ಡಾ.ಬಿ.ವಿ. ನಾಗವೇಣಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ.ಷಣ್ಮುಖಪ್ಪ ನಿರೂಪಿಸಿದರು. ಉಪನ್ಯಾಸಕ ಉಜ್ಜಪ್ಪ ವಂದಿಸಿದರು.































