
ಪುತ್ತೂರು ತಾಪಂನಲ್ಲಿ ಗೃಹ ಉತ್ಪನ್ನಗಳ ಬಿಡುಗಡೆ
ಪುತ್ತೂರು; ಪುತ್ತೂರು ತಾಲೂಕುಪಂಚಾಯಿತಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ತರಬೇತಿ ಸಮಾರೋಪದಲ್ಲಿ ನಿಡ್ಪಳ್ಳಿಯ ಶಾಂತದುರ್ಗಾ ಸಂಜೀವಿನಿ ಗ್ರಾಮ ಒಕ್ಕೂಟದ ಅಧ್ಯಕ್ಷೆ ಗಾಯತ್ರಿ ಭಟ್ ಅವರ ಗೃಹ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಗ್ರಾಮೀಣ ಭಾಗದ ಇಂತಹ ಗೃಹ ಉತ್ಪನ್ನಗಳ ತಯಾರಿಕೆಯ ಮೂಲಕ ಸಾಕಷ್ಟು ಕುಟುಂಬಗಳು ಆರ್ಥಿಕ ಭದ್ರತೆಯನ್ನು ಪಡೆದುಕೊಂಡಿವೆ. ಸ್ವ ಉದ್ಯೋಗದ ಆಸಕ್ತಿ ಯುವ ಜನತೆಯಲ್ಲಿ ಹೆಚ್ಚಾಗಲು ಇಂತಹ ಗೃಹಚಟುವಟಿಕೆಗಳು ಪ್ರೇರಣಾದಾಯಕವಾಗಿವೆ. ವಿಶೇಷವಾಗಿ ಮಹಿಳೆಯರು ಈ ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಕುಟುಂಬದ ರಕ್ಷಣೆಗೆ ಮುಂದಾಗುತ್ತಿರುವುದು ಸ್ಪೂರ್ತಿದಾಯಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಗ್ಯಾರAಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅವರು ಮಾತನಾಡಿ, ಗೃಹಕೃತ್ಯಗಳ ಜತೆಗೆ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಯೋಚನೆಗಳು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಹೆಚ್ಚಾಗಬೇಕು. ಇದೊಂದು ಸ್ವಾವಲಂಬಿ ಬದುಕಿಗೆ ಪೂರಕವಾದ ಪ್ರಕ್ರಿಯೆಯಾಗಿದೆ. ಸ್ವ ಉದ್ಯೋಗಗಳಿಗೆ ಬೆಂಬಲ ನೀಡುವ ಸಂಜೀವಿನಿಯAತಹ ವ್ಯವಸ್ಥೆಗಳಿರುವಾಗ ಇಂತಹ ಅವಕಾಶಗಳನ್ನು ನಾವು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಬಿಜಿ ರಾಮ್ ಜಿ ಸಹಾಯಕ ನಿರ್ದೇಶಕ ಸುಭಾಶ್ ಚಂದ್ರ, ತಾಲೂಕು ಯೋಜನಾಧಿಕಾರಿ ಶೋಭಾ, ತಾಪಂ ಸಹಾಯಕ ಲೆಕ್ಕಾಧಿಕಾರಿ ರವಿಚಂದ್ರ, ಎಸ್ಐಆರ್ಡಿ ತರಬೇತಿ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಬಡಗನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಾಯತ್ರಿ ಭಟ್ ಅವರ ಗೃಹ ಉತ್ಪನ್ನಗಳಾದ ಮಾವಿನಮಿಡಿ ಉಪ್ಪಿನಕಾಯಿ, ಶುದ್ಧ ಜೇನುತುಪ್ಪ, ಶುದ್ಧ ಹಸುವಿನ ತುಪ್ಪ, ಹಲಸಿನ ಹಪ್ಪಳ, ಸಾಬಕ್ಕಿ ಸಂಡಿಗೆ, ಮರಗೆಣಸು ಹಪ್ಪಳ, ಡಿಶ್ವಾಶ್ ಪಾತ್ರೆ ಲಿಕ್ವಿಡ್, ಬಟ್ಟೆ ತೊಳೆಯುವ ಲಿಕ್ವಿಡ್, ಪಿಯರ್ಸ್ ಸೋಪ್, ನೆಲ ಒರೆಸುವ ಲಿಕ್ವಿಡ್ ಮತ್ತಿತರ ವಸ್ತುಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಜೀವಿನಿ ವಲಯ ಮೇಲ್ವಿಚಾರಕಿ ನಮಿತಾ ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮಪಂಚಾಯಿತಿ ಒಕ್ಕೂಟದ ಅಧ್ಯಕ್ಷರು ಮತ್ತು ತಾಲೂಕು ಪಂಚಾಯಿತಿ ಸಿಬಂದಿಗಳು ಭಾಗವಹಿಸಿದ್ದರು.

























