Home ಜಿಲ್ಲೆ ಮನೆ ಮನೆಗೆ ಬಿಎಲ್ಒಗಳ ಭೇಟಿ 8.28 ಲಕ್ಷಕ್ಕೂ ಅಧಿಕ ಗಣತಿ ನಮೂನೆಗಳ ವಿತರಣೆ

ಮನೆ ಮನೆಗೆ ಬಿಎಲ್ಒಗಳ ಭೇಟಿ 8.28 ಲಕ್ಷಕ್ಕೂ ಅಧಿಕ ಗಣತಿ ನಮೂನೆಗಳ ವಿತರಣೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜು.5  ವಿಜಯನಗರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು 8,28,650 (ಶೇ 72.51) ಗಣತಿ ನಮೂನೆಗಳನ್ನು  ವಿತರಿಸಲಾಗಿದೆ.

ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಟ್ಟು 11,42,732 ಮತದಾರರಿದ್ದು. ಈಗಾಗಲೇ ಶೇ. 94 ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಜೂನ್ 30 ರಿಂದ ಅಭಿಯಾನ ಪ್ರಾರಂಭವಾಗಿದ್ದು, ಜುಲೈ 29 ರವರೆಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ನಡೆಯಲಿದೆ.

ವಿತರಿಸಲಾದ ಗಣತಿ ನಮೂನೆಗಳ ಪೈಕಿ ಒಟ್ಟು 33,987 (ಶೇ. 2.97) ನಮೂನೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇದಲ್ಲದೆ, 516 ಮತದಾರರು ಸ್ವತಃ ಆನ್ಲೈನ್ ಮೂಲಕ ನಮೂನೆಗಳನ್ನು ಸಲ್ಲಿಸಿದ್ದಾರೆ. ಬಿಎಲ್ಒಗಳ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ 289 ಮೃತ ಮತದಾರರು ಹಾಗೂ ಖಾಯಂ ಆಗಿ ಸ್ಥಳಾಂತರಗೊಂಡಿರುವ 131 ಮತದಾರರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ  ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.