
ಮುಂಬೈ, ಸೆ. 21- ರಿಯಾಲಿಟಿ ಶೋ ಬಿಗ್ ಬಾಸ್ 20' ರ ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪಾಪರಾಜಿಗಳು ಮತ್ತು ಸಾಮಾಜಿಕ ಜಾಲತಾಣಗಳ ಟ್ರೋಲರ್ಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಕಲಾವಿದರ ಅನುಚಿತ ಕೋನಗಳಿಂದ, ವಿಶೇಷವಾಗಿ ಕಾರಿನಿಂದ ಇಳಿಯುವಾಗ ಅಥವಾ ಕುಳಿತುಕೊಳ್ಳುವಾಗ ಹಿಂಭಾಗ ಹಾಗೂ ತೊಡೆಗಳ ಭಾಗವನ್ನು ಸೆರೆಹಿಡಿದು ಪೆÇೀಸ್ಟ್ ಮಾಡುವ ಪಾಪರಾಜಿಗಳ ವಿಕೃತ ಮನಸ್ಥಿತಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಚಿತ್ರಗಳ ಮೇಲೆ “ಇವರು ಯಾರು ಎಂದು ಊಹಿಸಿ” ಎನ್ನುವ ಶೀರ್ಷಿಕೆಗಳನ್ನು ಹಾಕಿ ಹಂಚಿಕೊಳ್ಳುವುದನ್ನು ಪ್ರಶ್ನಿಸಿದ ಅವರು, ಸಾಯಿ ಮಂಜ್ರೇಕರ್, ನೇಹಾ ಧೂಪಿಯಾ ಮತ್ತು ತಮ್ಮ ಸ್ವಂತ ಸೊಸೆಯ ಮೇಲೂ ಇಂತಹ ಪ್ರಸಂಗಗಳು ನಡೆದಿರುವುದನ್ನು ಉಲ್ಲೇಖಿಸಿದರು. ಇಂತಹ ಅನುಚಿತ ವರ್ತನೆಯಿಂದ ಅನಾನುಕೂಲತೆಯನ್ನು ಅನುಭವಿಸುವ ಮಹಿಳೆಯರು ಮೌನವಾಗಿರದೆ, ತಕ್ಷಣ ತಿರುಗಿ ನಿಂತು ಕಪಾಳಮೋಕ್ಷ ಮಾಡುವ ಮೂಲಕ ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದಾರೆ.
ಸಲ್ಮಾನ್ ಖಾನ್ ಅವರ ಈ ದಿಟ್ಟ ನಿಲುವಿಗೆ ಚಲನಚಿತ್ರೋದ್ಯಮದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಟಿ ನೇಹಾ ಧೂಪಿಯಾ ತಮ್ಮ ಬೆಂಬಲ ಸೂಚಿಸುತ್ತಾ “ಟೈಗರ್ ಜೀವಂತವಾಗಿದೆ” ಎಂದು ಬರೆದುಕೊಂಡಿದ್ದರೆ, ನಟ ವರುಣ್ ಧವನ್ ತಮ್ಮ ತಂದೆ ಡೇವಿಡ್ ಧವನ್ ಅವರೊಂದಿಗೆ ವಿಡಿಯೋ ಹಂಚಿಕೊಂಡು ಸಲ್ಮಾನ್ ಹೇಳಿಕೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನಿರ್ದೇಶಕ ಕುನಾಲ್ ಕೊಹ್ಲಿ ಕೂಡ ಸಾಮಾಜಿಕ ಜಾಲತಾಣದ ನಡವಳಿಕೆ ಹಾಗೂ ಪಾಪರಾಜಿ ಸಂಸ್ಕೃತಿಯ ಬಗ್ಗೆ ಸಲ್ಮಾನ್ ಎತ್ತಿರುವ ಪ್ರಮುಖ ಅಂಶಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇನ್ನೊಂದೆಡೆ, ಕತ್ರಿನಾ ಕೈಫ್ ಅವರ ತೂಕದ ಕುರಿತು, ತಮ್ಮ ಸಹೋದರ ಸೊಹೈಲ್ ಅವರ ಮುಖ ಮತ್ತು ಸನ್ನಿ ಡಿಯೋಲ್ ಅವರ ಹರಿದ ಶೂಗಳ ಬಗ್ಗೆ ಟ್ರೋಲ್ ಮಾಡುವವರನ್ನೂ ಸಲ್ಮಾನ್ ಇದೇ ವೇದಿಕೆಯಲ್ಲಿ ತೀಕ್ಷ್ಣವಾಗಿ ಖಂಡಿಸಿದ್ದಾರೆ. ಆದರೆ, `ಬಿಗ್ ಬಾಸ್ 7′ ರ ಮಾಜಿ ಸ್ಪರ್ಧಿ ಸೋಫಿಯಾ ಹಯಾತ್ ಮಾತ್ರ ಸಲ್ಮಾನ್ ಖಾನ್ ಅವರನ್ನು ಕಪಟಿ ಎಂದು ಟೀಕಿಸಿದ್ದು, ಹಿಂದೆ ಬಿಗ್ ಬಾಸ್ ಶೋನಲ್ಲಿದ್ದಾಗ ಸಲ್ಮಾನ್ ತಮ್ಮ ದೇಹ ಮತ್ತು ಮುಖದ ಕುರಿತು ಟೀಕೆ ಮಾಡಿದ್ದರೆಂದು ಆರೋಪಿಸಿದ್ದಾರೆ.































