
ಚಿಕಾಗೋ,ನ. 20-ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತ್ರ ಆ ದೇಶದೊಂದಿಗೆ ಮಾತುಕತೆಗೆ ಅವಕಾಶವಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯೊಂದಿಗೆ ನಡೆದ ಸಂವಾದದಲ್ಲಿ ಪಾಕಿಸ್ತಾನದ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದೇ ಮಾತುಕತೆಗೆ ಪ್ರಮುಖ ಅಡ್ಡಿಯಾಗಿದೆ ಎಂದು ಹೇಳಿದರು.
“ನಮ್ಮ ನಿರಪರಾಧ ಜನರು ಹತ್ಯೆಯಾಗುತ್ತಿರುವಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಬೆಂಬಲ ನಿಂತಾಗ ಮಾತ್ರ ಮಾತುಕತೆ ಆರಂಭಿಸುವ ಸಾಧ್ಯತೆ ಇದೆ” ಎಂದು ಅವರು ಸ್ಪಷ್ಟಪಡಿಸಿದರು.ಇಸ್ರೇಲ್ ಸಂಬಂಧ, ಗಾಜಾ ದಾಳಿ ಖಂಡನೆಭಾರತದ ವಿದೇಶಾಂಗ ನೀತಿ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಇಸ್ರೇಲ್ನೊಂದಿಗೆ ಭಾರತದ ಬಲವಾದ ಸಂಬಂಧವನ್ನು ಬೆಂಬಲಿಸುವುದಾಗಿ ಹೇಳಿದರು. ಆದರೆ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿದರು.
ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳಿಗಾಗಿ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಅಗತ್ಯ. ಆದರೆ ಅದಕ್ಕಾಗಿ ಗಾಜಾದಲ್ಲಿನ ಘಟನೆಗಳ ಬಗ್ಗೆ ಮೌನವಾಗಿರಬೇಕೆಂದಿಲ್ಲ. ಅಕ್ಟೋಬರ್ 7ರ ದಾಳಿಯನ್ನು ಹಾಗೂ ನಿರಪರಾಧಿಗಳ ಹತ್ಯೆಯನ್ನು ಖಂಡಿಸುತ್ತೇನೆ. ಅದೇ ರೀತಿ ಗಾಜಾದಲ್ಲಿ ಇಸ್ರೇಲ್ ನಡೆಸಿರುವ ದಾಳಿಯನ್ನೂ ಖಂಡಿಸುತ್ತೇನೆ. ಒಂದು ತಪ್ಪು ಮತ್ತೊಂದು ತಪ್ಪನ್ನು ಸಮರ್ಥಿಸುವುದಿಲ್ಲ ಎಂದು ಹೇಳಿದರು.
ಭಾರತವು 150 ಕೋಟಿ ಜನಸಂಖ್ಯೆಯ ರಾಷ್ಟ್ರವಾಗಿದ್ದು, ಅಮೆರಿಕ, ಇಸ್ರೇಲ್, ರಷ್ಯಾ ಅಥವಾ ಚೀನಾ ಯಾವುದೇ ದೇಶವೂ ಜಾಗತಿಕ ವೇದಿಕೆಯಲ್ಲಿ ಭಾರತ ತನ್ನ ಪಾತ್ರ ನಿರ್ವಹಿಸುವುದನ್ನು ತಡೆಯಬಾರದು. ಭಾರತ ತನ್ನ ನಂಬಿಕೆ ಮತ್ತು ನಿಲುವುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದರು.
ಪಾಕಿಸ್ತಾನ ಇರಾನ್ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿರುವಾಗ ಭಾರತ ಕೇವಲ ವೀಕ್ಷಕನಾಗಿ ಉಳಿದಿರುವುದು ಆಶ್ಚರ್ಯಕರವಾಗಿದೆ. ಸ್ವಾತಂತ್ರ್ಯದಿಂದಲೇ ಭಾರತ ಜಾಗತಿಕ ರಾಜಕೀಯದ ಬಗ್ಗೆ ತನ್ನದೇ ಆದ ವಿಶ್ಲೇಷಣೆ ಹಾಗೂ ಸ್ವತಂತ್ರ ವಿದೇಶಾಂಗ ನೀತಿ ಹೊಂದಿತ್ತು. ದೇಶಕ್ಕೆ ಯಾವುದು ಹಿತಕರ ಎಂಬುದರ ಆಧಾರದಲ್ಲಿ ನೀತಿಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಚುನಾವಣೆ ಬಹಿಷ್ಕರಿಸುವ ಸಾಧ್ಯತೆಯನ್ನು ರಾಹುಲ್ ಗಾಂಧಿ ತಳ್ಳಿಹಾಕಿದರು. ಚುನಾವಣೆ ಬಹಿಷ್ಕರಿಸುವುದು ಪ್ರಜಾಪ್ರಭುತ್ವಕ್ಕೆ ಅಂತ್ಯ ಹಾಡಿದಂತೆ. ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಲಿದೆ. ಸೋಲು ಎದುರಾದರೂ ವ್ಯವಸ್ಥೆಯಲ್ಲಿನ ಲೋಪಗಳನ್ನು ಪ್ರಶ್ನಿಸಿ ಹೋರಾಟ ನಡೆಸಲಿದೆ ಎಂದು ಹೇಳಿದರು.





















