
ಸಂಜೆವಾಣಿ ವಾರ್ತೆ
ಹೊಸಪೇಟೆ.ಆ.14 ವಿಜಯನಗರ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಹಾಗೂ ರಾಗಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದು. ಇದಕ್ಕೆ ಕಡಿವಾಣ ಹಾಕುವಂತೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಒತ್ತಾಯಿಸಿದೆ.
ಈ ಕುರಿತು ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿಪತ್ರ ಸಲ್ಲಿಸಿರುವ ಡಿವೈಎಫ್ಐ ಕಾರ್ಯಕರ್ತರು, ಜಿಲ್ಲೆಯ ರೇಷನ್ ಅಂಗಡಿಗಳಲ್ಲಿ ನೀಡುವ ಅನ್ನಭಾಗ್ಯ ವಿತರಣೆ ಅಕ್ಕಿ ಮತ್ತು ರಾಗಿಯನ್ನು ರಾಜಾರೋಷವಾಗಿ ಆಟೋ, ಟಾಟಾ ಏಸಿ, ಹಾಗೂ ಲಾರಿಗಳ ಮೂಲಕ ಬೇರೆ ಬೇರೆ ಜಿಲ್ಲೆಗಳಿಗೆ ಸಾಗಾಟ ಮಾಡಲಾಗುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ಪೋಲೀಸ್ ಇಲಾಖೆಯ ಸಹಯೋಗದೊಂದಿಗೆ ರಾಜರೋಷವಾಗಿ ಈ ದಂದೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ ಕಾನೂನಿನ ಭಯವಿಲ್ಲದೆ ಪಡಿತರ ಧಾನ್ಯಗಳನ್ನು ರಾಜಾರೋಷವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದರೂ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸಣ್ಣಪುಟ್ಟ ಪ್ರಕರಣಗಳನ್ನು ದಾಖಲಿಸುವುದು ಬಿಟ್ಟರೆ, ಕಳ್ಳ ಸಾಗಾಣಿಕೆ ತಡೆಗೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅವರು ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ. ಒಂದು ವೇಳೆ ಪಡಿತರ ಧಾನ್ಯಗಳ ಸಾಗಾಣಿಕೆಯನ್ನು ತಡೆಯಲು ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ತಿವ್ರ ತೆರನಾದ ಹೋರಾಟವನ್ನು ಹಮ್ಮಿಕೊಳ್ಳಲಾಗುದು ಎಂದು ಅವರು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷ ವಿ.ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಉಪಾಧ್ಯಕ್ಷರಾದ ಬಂಡೆ ತಿರುಕಪ್ಪ, ಅಲ್ತಾಫ್ ಸೇರಿದಂತೆ ಕಾರ್ಯಕರ್ತರು ಇದ್ದರು.





























