
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಸೆ.26: ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ರೈತರಿದ್ದು. ರಾಜ್ಯ ಸರ್ಕಾರ ಅರ್ಹ ರೈತರಿಗೆ ಮೊದಲ ಹಂತದಲ್ಲಿ ಬರ ಪರಿಹಾರ ತಲಾ 2500 ರೂ ನೀಡುವ ಘೋಷಣೆ ಮಾಡಿದ್ದು ಇದನ್ನು ತಲುಪಿಸುವ ಕಾರ್ಯ ಪ್ರಾರಂಭಿಸಬೇಕು ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ವಿಷಯವನ್ನು ಸಂಭದಿಸ೮ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ತಹಶೀಲ್ದಾರ್ ನೇತೃತ್ವದ ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿಗಳು ನಿಯಮಿತವಾಗಿ ಸಭೆಗಳನ್ನು ನಡೆಸಿ, ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಗಳ ಬಗ್ಗೆ ತಕ್ಷಣವೇ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೇವಿನ ಕಿಟ್ :
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ 10,475 ಮೇವು ಮಿನಿ ಕಿಟ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬಳ್ಳಾರಿ-2,649 ಕಿಟ್, ಸಿರುಗುಪ್ಪ-2,389 ಕಿಟ್, ಸಂಡೂರು-3,241 ಕಿಟ್, ಕುರುಗೋಡು-1,123 ಕಿಟ್ ಹಾಗೂ ಕಂಪ್ಲಿ-1,073 ಕಿಟ್ಗಳನ್ನು ವಿತರಿಸ ಬೇಕಿದೆ.
ನೀರಿನ ಸೌಲಭ್ಯ ಹಾಗೂ ಜಾನುವಾರುಗಳನ್ನು ಹೊಂದಿರುವ ಅರ್ಹ ರೈತರಿಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಕಿಟ್ ಗಳು ಬಂದ ಕೂಡಲೇ ವಿತರಿಸಲಿದೆಂದು ಪಶು, ಸಂಗೋಪನಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಎಲ್-ನಿನೋ ಪ್ರಭಾವದಿಂದಾಗಿ ಮಳೆ ಮಾದರಿ ಹದಗೆಟ್ಟಿದ್ದು, ಈಶಾನ್ಯ ಮುಂಗಾರು ಸಹ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆಯ ದಿನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಸ್ಥಳೀಯ ಸಂಸ್ಥೆಗಳು, ತಾಲೂಕು ಪಂಚಾಯಿತಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಕ್ಷಣವೇ ಮುನ್ನೆಚ್ಚರಿಕಾ ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ..
ಜಿಲ್ಲೆಯಲ್ಲಿ 1,25,044 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮಳೆ ಕೊರತೆ ಹಾಗೂ ತೀವ್ರ ಬರದಿಂದಾಗಿ 67,235 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ ಹಾಗೂ ವಿಶೇಷವಾಗಿ ಹತ್ತಿ ಬೆಳೆಗೆ ಭಾರಿ ಹೊಡೆತ ಬಿದ್ದಿದೆ. ಹತ್ತಿ ಗಿಡಗಳು ಬೆಳೆವಣಿಗೆ ಕುಂಠಿತಗೊಂಡು ಹಾನಿಗೊಳಗಾಗಿವೆ. ವಿಮಾ ಕ್ಲೈಮ್ಗಳು ರೈತರಿಗೆ ತಲುಪುವಂತೆ ಮಾಡಲು ವಿಮಾ ಕಂಪನಿಗಳ ವಿರುದ್ಧ ದೃಢ ನಿಲುವು ತಳೆಯಬೇಕು. ಕೇವಲ ಪತ್ರ ವ್ಯವಹಾರ ಅಥವಾ ದೂರವಾಣಿ ಕರೆಗಳಿಗೆ ಸೀಮಿತವಾಗದೆ, ಬೆಂಗಳೂರಿನಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿಗಳನ್ನು ಖುದ್ದು ಭೇಟಿಯಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಸರಾಸರಿ ಶೇ. 50ಕ್ಕೂ ಹೆಚ್ಚು ಇಳುವರಿ ನಷ್ಟ ಸಂಭವಿಸಿದೆ. ಜಿಲ್ಲೆಯಾದ್ಯಂತ ಸುಮಾರು 50 ಸಾವಿರಕ್ಕೂ ಹೆಚ್ಚು ರೈತರು 8.7 ಕೋಟಿ ರೂ.ಗಳಿಗೂ ಅಧಿಕ ಪ್ರೀಮಿಯಂ ಮೊತ್ತವನ್ನು ಬೆಳೆ ವಿಮೆಗೆ ಪಾವತಿಸಿದ್ದು, ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು..ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಡಿಯುಡಿಸಿ ಪಿಡಿ ಅಬ್ದುಲ್ ರೆಹಮಾನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.






















