Home ಜಿಲ್ಲೆ ಮೈಸೂರು ಕುರುಬೂರು ಪಟ್ಟದ ಮಠದಲ್ಲಿ ಸದಾಶಿವ ಸ್ವಾಮಿಗಳವರ ಸಂಸ್ಮರಣೋತ್ಸವ

ಕುರುಬೂರು ಪಟ್ಟದ ಮಠದಲ್ಲಿ ಸದಾಶಿವ ಸ್ವಾಮಿಗಳವರ ಸಂಸ್ಮರಣೋತ್ಸವ

ಸಂಜೆವಾಣಿ ವಾರ್ತೆ
ತಿ.ನರಸೀಪುರ. ಮೇ.2-
ಭಗವಂತನ ಬಗ್ಗೆ ಜನರಲ್ಲಿ ಅಚಲವಾದ ನಂಬಿಕೆ, ಭಕ್ತಿ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವುದು ಧಾರ್ಮಿಕ ಸಂಸ್ಥೆಗಳ ಹಾಗೂ ಮಠಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿ ಅಭಿಪ್ರಾಯಪಟ್ಟರು.


ತಾಲೂಕಿನ ಕುರುಬೂರು ಗ್ರಾಮದಲ್ಲಿ ಪಟ್ಟದ ಮಠದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಸದಾಶಿವಸ್ವಾಮಿಗಳವರ ಗದ್ದುಗೆ ಜೀರ್ಣೋದ್ಧಾರ ಹಾಗು 15 ನೇ ವರ್ಷದ ಸಂಸ್ಮರಣೋತ್ಸವ ,ಗುರು ಮಲ್ಲೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗು 5 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಭಗವಂತನಲ್ಲಿ ನಂಬಿಕೆ ಇಟ್ಟವನಿಗೆ ಬದುಕಿನಲ್ಲಿ ಯಾವುದೇ ಸಂಕಷ್ಟವೂ ಅಸಾಧ್ಯವಲ್ಲ. ಭಕ್ತಿ ಮನುಷ್ಯನ ಮನಸ್ಸಿಗೆ ಶಾಂತಿ, ಧೈರ್ಯ ಮತ್ತು ನೆಮ್ಮದಿಯನ್ನು ನೀಡುತ್ತದೆ. ಆದ್ದರಿಂದ ಸಮಾಜದಲ್ಲಿ ದೇವರ ಬಗ್ಗೆ ಭಕ್ತಿ ಹಾಗೂ ವಿಶ್ವಾಸ ಬೆಳೆಸುವುದು ಅತ್ಯಗತ್ಯ,ಎಂದು ಶ್ರೀಗಳು ಹೇಳಿದರು.


ಇಂದಿನ ಆಧುನಿಕ ಯುಗದಲ್ಲಿ ಭೌತಿಕ ಸಾಧನೆಗಳ ಹಿಂದೆ ಓಡುತ್ತಿರುವ ಮನುಷ್ಯ, ಆತ್ಮೀಯತೆಯನ್ನು ಮರೆತಿದ್ದಾನೆ. ಈ ಸಂದರ್ಭದಲ್ಲಿ ಮಠಗಳು ಮತ್ತು ಧಾರ್ಮಿಕ ಕೇಂದ್ರಗಳು ಜನರಿಗೆ ಭಗವಂತನ ಮಹತ್ವವನ್ನು ತಿಳಿಸಿ, ಆಧ್ಯಾತ್ಮಿಕ ಜೀವನದತ್ತ ದಾರಿ ತೋರಿಸಬೇಕು,ಭಗವಂತನಲ್ಲಿ ನಂಬಿಕೆ ಎಂದರೆ ಕೇವಲ ಪೂಜೆ ಮಾಡುವುದಲ್ಲ; ಸತ್ಯ, ಧರ್ಮ, ದಯೆ ಮತ್ತು ಪ್ರೀತಿಯ ಮಾರ್ಗದಲ್ಲಿ ನಡೆಯುವುದಾಗಿದೆ. ಇಂತಹ ನಂಬಿಕೆಯು ವ್ಯಕ್ತಿಯ ಜೀವನವನ್ನು ಉಜ್ವಲಗೊಳಿಸುತ್ತದೆ, ಎಂದು ಅವರು ಹೇಳಿದರು.


ಮಠಗಳು ಶಿಕ್ಷಣ, ದಾಸೋಹ, ಧಾರ್ಮಿಕ ಪ್ರವಚನಗಳು ಮತ್ತು ಸೇವಾ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಆಧ್ಯಾತ್ಮಿಕ ಚೇತನವನ್ನು ಮೂಡಿಸುತ್ತಿವೆ. ಈ ಕಾರ್ಯ ಮತ್ತಷ್ಟು ವಿಸ್ತಾರವಾಗಬೇಕು ಎಂದು ಆಶಿಸಿದ ಶ್ರೀಗಳು ಭಗವಂತನ ಆಶ್ರಯದಲ್ಲಿ ಬದುಕಿದಾಗ ಮಾನವನ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ದೇವರ ಮೇಲಿನ ನಂಬಿಕೆಯನ್ನು ಬೆಳೆಸಿಕೊಂಡು, ಧರ್ಮಮಾರ್ಗದಲ್ಲಿ ಸಾಗಬೇಕು ಎಂದು ಸುತ್ತೂರು ಶ್ರೀಗಳು ಆಶೀರ್ವದಿಸಿದರು.


ಸದಾಶಿವ ಸ್ವಾಮಿಗಳವರ ಸಂಸ್ಮರಣೋತ್ಸವವು ನಮ್ಮೆಲ್ಲರಿಗೂ ಅತ್ಯಂತ ಭಾವನಾತ್ಮಕ ಹಾಗೂ ಪ್ರೇರಣಾದಾಯಕ ಕ್ಷಣವಾಗಿದೆ. ಒಬ್ಬ ಮಹಾನ್ ಸಂತ, ಆಧ್ಯಾತ್ಮಿಕ ಚೇತನ, ಸಮಾಜ ಸುಧಾರಕ ಮತ್ತು ಮಾನವತಾವಾದಿಯನ್ನು ಸ್ಮರಿಸುವ ಈ ಪುಣ್ಯ ಸಂದರ್ಭದಲ್ಲಿ ಅವರ ಪವಿತ್ರ ಜೀವನ, ಅಪಾರ ಸೇವೆ ಮತ್ತು ಅಮೂಲ್ಯ ಸಂದೇಶಗಳನ್ನು ನೆನೆಯುವುದು ನಮ್ಮೆಲ್ಲರ ಭಾಗ್ಯವಾಗಿದೆ.
ಸದಾಶಿವ ಸ್ವಾಮಿಗಳವರು ತಮ್ಮ ಇಡೀ ಬದುಕನ್ನು ಸಮಾಜ ಸೇವೆಗೆ, ಧರ್ಮದ ಉಳಿವಿಗೆ ಮತ್ತು ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆಗೆ ಸಮರ್ಪಿಸಿದರು. ಅವರ ಜೀವನದಲ್ಲಿ ಸರಳತೆ ಇತ್ತು, ನಡೆನುಡಿಯಲ್ಲಿ ಶುದ್ಧತೆ ಇತ್ತು, ಮಾತಿನಲ್ಲಿ ಮಧುರತೆ ಇತ್ತು, ಕಾರ್ಯದಲ್ಲಿ ಕರುಣೆ ಇತ್ತು. ಅವರು ಜಾತಿ, ಮತ, ಪಂಥಗಳ ಅಂತರವಿಲ್ಲದೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ, ಸಮಾಜದಲ್ಲಿ ಸೌಹಾರ್ದತೆಯ ಬೀಜ ಬಿತ್ತಿದ ಮಹಾನ್ ದಾರ್ಶನಿಕರಾಗಿದ್ದರು.ಸ್ವಾಮೀಜಿಗಳವರು ನೀಡಿದ ಸಂದೇಶಗಳು ಇಂದಿಗೂ ಸಮಕಾಲೀನವಾಗಿವೆ. “ಮಾನವ ಸೇವೆಯೇ ಮಾಧವ ಸೇವೆ ಎಂಬ ಅವರ ಆದರ್ಶವು ಪ್ರತಿಯೊಬ್ಬರ ಜೀವನದ ಮಾರ್ಗದರ್ಶಕವಾಗಬೇಕು. ಪ್ರೀತಿ, ಕರುಣೆ, ಸಹನೆ, ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ಸಾಗುವಂತೆ ಅವರು ಬೋಧಿಸಿದರು ಎಂದು ಹೇಳಿದರು.


ಗುಂಡ್ಲುಪೇಟೆ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ ಸದಾಶಿವ ಸ್ವಾಮಿಗಳವರ ಸಂಸ್ಮರಣೋತ್ಸವವು ಅವರ ಆದರ್ಶ, ಆಧ್ಯಾತ್ಮಿಕತೆ ಮತ್ತು ಸಮಾಜಸೇವೆಯನ್ನು ಸ್ಮರಿಸುವ ಪವಿತ್ರ ಕಾರ್ಯಕ್ರಮವಾಗಿದೆ. ಅವರ ಜೀವನವು ನಿಸ್ವಾರ್ಥ ಸೇವೆ, ಧರ್ಮಪ್ರಚಾರ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿತ್ತು. ಅವರು ತೋರಿದ ದಾರಿಯಲ್ಲಿ ನಡೆಯುವುದು, ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.


ಸ್ವಾಮೀಜಿಗಳವರು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯ ಸಂದೇಶವನ್ನು ಸಾರಿದರು. ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಅನೇಕ ಜನರ ಬದುಕು ಬೆಳಗಿತು. ಅವರ ಸಂಸ್ಮರಣೋತ್ಸವವು ಕೇವಲ ನೆನಪಿನ ದಿನವಲ್ಲ, ಅವರ ಆದರ್ಶಗಳನ್ನು ಪುನರುಚ್ಚರಿಸುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಸುವರ್ಣಾವಕಾಶವಾಗಿದೆ ಎಂದರು.
ಕುರುಬೂರು ಪಟ್ಟದ ಮಠದ ಶ್ರೀ ಮಲ್ಲಿನಾಥ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಸದಾಶಿವಸ್ವಾಮಿಗಳು ಕೇವಲ ಮಠದ ಪೀಠಾಧಿಪತಿಗಳಾಗಿರದೆ, ಸಮಾಜದ ಮಾರ್ಗದರ್ಶಕರಾಗಿದ್ದರು. ಶಿಕ್ಷಣ, ಆರೋಗ್ಯ, ಅನ್ನದಾಸೋಹ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರ ಬದುಕಿನಲ್ಲಿ ಆಶಾಕಿರಣ ಮೂಡಿಸಿದರು. ಬಡವರು, ನಿರ್ಗತಿಕರು ಮತ್ತು ನೊಂದವರ ಪರವಾಗಿ ಸದಾ ನಿಂತು ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.


ಸದಾಶಿವ ಸ್ವಾಮೀಜಿಗಳ ಪ್ರವಚನಗಳು ಜನರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಧಾರ್ಮಿಕ ಚಿಂತನೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದ್ದವು ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಾಟಾಳು ಸೂರ್ಯ ಸಿಂಹಾಸನಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕನಕಪುರ ದೇಗುಲ ಮಠದ ಡಾ.ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಬೆಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ದೇವನೂರು ಮಠದ ಮಹಾಂತಸ್ವಾಮೀಜಿ, ಮುಡುಕನಪುರ ಹಲವಾರ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಮಾಡ್ರಹಳ್ಳಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹುಲಿಯೂರುದುರ್ಗ ಸಿದ್ದಲಿಂಗ ಮಠದ ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ದಂಡಿಕೆರೆ ಮಠದ ಬಸವಲಿಂಗಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.


ಇದೇ ವೇಳೆ ಗುರುಮಲ್ಲೇಶ್ವರ ಪುತ್ಥಳಿ ಶಿಲ್ಪಿಗಳಾದ ರಾಜೇಶ್, ಗೋಪಾಲ್, ಸಮಾಜ ಸೇವಕ ಗಜೇಂದ್ರ ಹಾಗೂ ರಾಷ್ಟ್ರ ಮಟ್ಟದ ಖೋಖೋ ಆಟಗಾರ್ತಿ ಕುಮಾರಿ ಚೈತ್ರ ರವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಚನ್ನಬಸವಸ್ವಾಮಿ, ನಿಲಸೋಗೆ ದಾಸೋಹ ಮಠದ ಮಲ್ಲಪ್ಪಸ್ವಾಮಿ, ಕೆಆರ್ ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಕಪ್ಪಸೋಗೆ ಸಿದ್ದಮಲ್ಲಪ್ಪ, ತೊಟ್ಟವಾಡಿ ರವಿ,ತೋಟದಪ್ಪ ಬಸವರಾಜು, ಕೆ.ಎನ್.ಶಿವಕುಮಾರ್, ಕೆ.ವಿ.ಶಿವಶಂಕರ್, ಕುರುಬೂರು ಸಿದ್ದೇಶ್, ಸೇರಿದಂತೆ ಗ್ರಾಮಸ್ಥರು, ಮುಖಂಡರು,ಯಜಮಾನರು ಹಾಜರಿದ್ದರು.