
ಸುಳ್ಯ:ಅಖಿಲ ಭಾರತ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟದ ಸಹಕಾರದಲ್ಲಿ ಕಲ್ಮಡ್ಕದಲ್ಲಿ ’ಕಲಾಗ್ರಾಮ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಉದ್ಘಾಟನೆ ಕಲ್ಮಡ್ಕದ ಸಾಯಿನಾರಾಯಣದ ಮನೆಯ ಸಭಾಭವನ ರೂಪದಲ್ಲಿ ನಡೆಯಿತು.
ವೇದಿಕೆಯಲ್ಲಿದ್ದ ಅತಿಥಿಗಳು ಜ್ಞಾನಜ್ಯೋತಿ ಬೆಳಗಿಸುವ ಮೂಲಕ ಕೇಂದ್ರವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಬಾಳಿಲ ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಗಳ ಸಂಚಾಲಕ ಯು. ರಾಧಾಕೃಷ್ಣ ರಾವ್ ಉಡುವೆಕೋಡಿ, ಕಲ್ಮಡ್ಕ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಬೆಂಗಳೂರಿನ ಲಾಸ್ಯ ನೃತ್ಯ ಅಕಾಡೆಮಿಯ ಮುಖ್ಯಸ್ಥ ಡಾ. ಲಕ್ಷ್ಮಿ ರೇಖಾ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಸಂಗೀತ ಮತ್ತು ನೃತ್ಯ ಅಸೋಸಿಯೇಷನ್ ಗೌರವಾಧ್ಯಕ್ಷ ವಿದ್ವಾನ್ ಕೆ. ಎಸ್. ಮೋಹನ್ ಕುಮಾರ್ ವಹಿಸಿ ಸಾಂಸ್ಕೃತಿಕ ಬೆಳಕನ್ನು ಪಸರಿಸುವ ಕೇಂದ್ರದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಸತ್ಯ ಸಾಯಿ ಸೇವಾ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಕೆ. ಎನ್. ಪರಮೇಶ್ವರಯ್ಯ, ಕಲಾ ಗ್ರಾಮ ಕಲ್ಮಡ್ಕ ಇದರ ಗೌರವಾಧ್ಯಕ್ಷ ಸುಬ್ರಾಯ ಭಟ್ ಅಮೈ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಲಾ ಸಾಧನೆಯ ಮೂಲಕ ಊರಿನ ಗೌರವವನ್ನು ಹೆಚ್ಚಿಸಿ, ಇದೀಗ ನಮ್ಮನ್ನಗಲಿದ ಗಣ್ಯರಾದ ಪಂಡಿತ ಕೆರೆಕೋಡಿ ಗಣಪತಿ ಭಟ್, ಚಿರಂತನ, ಪದ್ಯಾಣ ಗಣಪತಿ ಭಟ್, ರಾಮಣ್ಣಗೌಡ ರಾಮತ್ತಿಕಾರಿ ಹಾಗೂ ರೂಪ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಕಲಾಗ್ರಾಮದ ಸಂಚಾಲಕ ಮತ್ತು ಅಖಿಲ ಭಾರತ ಸಂಗೀತ ಮತ್ತು ನೃತ್ಯ ಅಸೋಸಿಯೇಷನ್ ಅಧ್ಯಕ್ಷ ವಿದ್ವಾನ್ ಸಾಯಿ ನಾರಾಯಣ ಕಲ್ಮಡ್ಕರಿಗೆ ಗೌರವಾರ್ಪಣೆ ನಡೆಯಿತು.
ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರಶಾಂತ್ ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಕಾಚಿಲರ ಪ್ರಾರ್ಥಿಸಿದರು. ವಿದ್ವಾನ್ ಸಾಯಿ ನಾರಾಯಣ ಕಲ್ಮಡ್ಕ ಸ್ವಾಗತಿಸಿ, ಕಲಾ ಗ್ರಾಮದ ಶೇಷಪ್ಪ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ’ಲಾಸ್ಯ ನೃತ್ಯ ಅಕಾಡೆಮಿ’ ತಂಡದಿಂದ ಡಾ. ಲಕ್ಷ್ಮಿ ರೇಖಾ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಿತು.































