
ಸಂಜೆವಾಣಿ ವಾರ್ತೆ
ಹೊಸಪೇಟೆ.ಜೂ.15 ಸ್ಥಳೀಯ ಎಂ.ಪಿ.ಪ್ರಕಾಶ ನಗರದ ಕೆ.ಎನ್.ಎ. ಎಂಟರ್ ಪ್ರೈಸಸ್ ಅಂಗಡಿ ಮುಂದಿನ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ಜರುಗಿದ ವ್ಯಕ್ತಿಯ ಬರ್ಭರ ಕೊಲೆಗೆ ಕಾರಣ ಪ್ರೀತಿ ಎನ್ನುವುದು ತಿಳಿದು ಬಂದಿದೆ.
ಕೊಲೆಯಾದ ಮಹಮದ್ ಯೂನೂಸ್ ನ ಹೆಂಡತಿಯ ತಂಗಿಯನ್ನು ಕೊಲೆ ಆರೋಪಿ ಚಿತ್ತವಾಡ್ಗಿಯ ಬಣಗಾರ ಓಣಿ ನಿವಾಸಿ ಖಾಜಾ(30) ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅದರೆ ಇದಕ್ಕೆ ಮೃತ ಮಹಮದ್ ಯೂನೂಸ್ ಒಪ್ಪಿರಲಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಆರೋಪಿ ಖಾಜಾ ಗೆ ಸರಿಯಾಗಿ ದುಡಿಯುವುದಿಲ್ಲ, ನಿನಗೆ ಹೀಳಿಕೊಳ್ಳುವಂತಹ ಕೆಲಸವಿಲ್ಲ. ಹಾಗಾಗಿ ತನ್ನ ಹೆಂಡತಿಯ ತಂಗಿಯನ್ನು ಮದುವೆ ಮಾಡಿ ಕೊಡುವುದಿಲ್ಲ ಅಂತ ಹೇಳಿ ಕಳುಹಿಸಿದ್ದ ಎನ್ನಲಾಗಿದೆ.
ಅಲ್ಲದೆ ಮೃತ ಮಹಮದ್ ಯೂನೂಸ್ ತನ್ನ ಹೆಂಡತಿಯ ತಂಗಿ ಜಿಯಾಳಿಗೆ ಬೇರೆ ಕಡೆ ಸಂಬಂಧ ಹುಡುಕಿ ಮದುವೆ ಕೂಡ ನಿಗಧಿ ಮಾಡಿದ್ದ. ಅದರ ಭಾಗವಾಗಿ ಭಾನುವಾರ ಜಿಯಾ ಳ ನಿಶ್ಚಿತಾರ್ಥ ಕೂಡ ನಿಗಧಿಯಾಗಿತ್ತು.
ತನ್ನ ಪ್ರೀತಿಗೆ ಅಡ್ಡಿಪಡಿಸಿದ್ದು ಅಲ್ಲದೆ, ಬೇರೆ ವ್ಯಕ್ತಿಯೊಂದಿಗೆ ಭಾನುವಾರವೇ ನಿಶ್ಚಿತಾರ್ಥ ನಿಗಧಿ ಮಾಡಿದ್ದರಿಂದ ಕುಪಿತಗೊಂಡ ಖಾಜಾ, ತನ್ನ ಸ್ನೇಹಿತ 7ನೇ ವಾರ್ಡಿನ ಪಾಂಡುರಂಗ ಕಾಲೋನಿ ನಿವಾಸಿ ಇರ್ಫಾನ್ @ ಮಹಮದ್ ಹುಸೇನ್(18) ಎಂಬುವಾತನೊಂದಿಗೆ ಸೇರಿಕೊಂಡು, ನಿಶ್ಚಿತಾರ್ಥದ ಹಿಂದಿನ ದಿನವಾದ ಶನಿವಾರ ರಾತ್ರಿ ಮಹಮದ್ ಯೂನೂಸ್ ಕೆಲಸ ಮುಗಿಸಿಕೊಂಡು ಮನೆಗೆ ಬರುವ ದಾರಿಯಲ್ಲಿ ಕಾದು ಕೊಂಡು ಕುಳಿತು, ಆತ ಬರುತ್ತಿದ್ದಂತೆ, ಎಂ.ಪಿ.ಪ್ರಕಾಶ ನಗರದ ಮುಖ್ಯ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕಣ್ಣಿಗೆ ಕಾರದಪುಡಿ ಎರಚಿ, ಇಬ್ಬರು ಚಾಕುವಿನಿಂದ ಚುಚ್ಚಿ, ಕತ್ತು ಕೊಯ್ದು, ಭೀಕರವಾಗಿ ಕೊಲೆ ಮಾಡಿ ಪರಾರಿ ಆಗಿದ್ದರು.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಖಾಜಾ ಹಾಗೂ ಇರ್ಫಾನ್ ರನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರೀತಿಸಿದ ವ್ಯಕ್ತಿಯೊಂದಿಗೆ ತನ್ನ ನಾದಿನಿಯನ್ನು ವಿವಾಹ ಮಾಡಿಕೊಡಲು ಒಪ್ಪದಿದ್ದಕ್ಕೆ ಮಹಮದ್ ಯೂನೂಸ್ ಭೀಕರವಾಗಿ ಕೊಲೆಯಾದರೆ, ತಾನೂ ಪ್ರೀತಿಸಿದ ಯುವತಿಯೊಂದಿಗೆ ವಿವಾಹವಾಗಲು ಅಡ್ಡಿಪಡಿಸಿದ ಎಂದು ಸಿಟ್ಟಿನ ಕೈಗೆ ಬುದ್ದಿಕೊಟ್ಟು, ಕೊಲೆ ಮಾಡಿದ ತಪ್ಪಿಗಾಗಿ ಖಾಜಾ ಹಾಗೂ ಆತನಿಗೆ ಸಹಾಯ ಮಾಡಿದ 2ನೇ ಆರೋಪಿ 18 ವರ್ಷದ ಯುವಕ ಇರ್ಫಾನ್ ಈಗ ಜೈಲು ಕಂಬಿ ಎಣಿಸುವಂತಾಗಿದೆ.


























