
ಕೇದಾರನಾಥ,ಸೆ.27-ಉತ್ತರ ಭಾರತದಲ್ಲಿ ವಾಯುಭಾರ ಕುಸಿತ ಹಾಗೂ ಅರ್ನಾಬ್ ಚಂಡಮಾರುತದ ಪ್ರಭಾವದಿಂದಾಗಿ ಸೃಷ್ಟಿಯಾಗಿರುವ ಭೀಕರ ಹವಾಮಾನ ವೈಪರೀತ್ಯವು ಭಾರೀ ವಿನಾಶವನ್ನು ಉಂಟುಮಾಡಿದ್ದು, ಉತ್ತರಾಖಂಡ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಸಾಲು ಸಾಲು ಭೂಕುಸಿತಗಳು ಸಂಭವಿಸಿದ್ದು, ಸುಮಾರು 4,000ಕ್ಕೂ ಹೆಚ್ಚು ಯಾತ್ರಿಕರು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ ತಂಗುದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಬೆಟ್ಟದ ಇಳಿಜಾರುಗಳಲ್ಲಿ ಕಲ್ಲು ಮತ್ತು ಮಣ್ಣು ನಿರಂತರವಾಗಿ ಕುಸಿಯುತ್ತಿರುವುದರಿಂದ ತೆರವು ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೇದಾರನಾಥ ಧಾಮ ಯಾತ್ರೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಹಾಗೂ ಹೆಲಿಕಾಪ್ಟರ್ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಹವಾಮಾನ ಇಲಾಖೆಯು ಡೆಹ್ರಾಡೂನ್, ತೆಹ್ರಿ, ಹರಿದ್ವಾರ ಮತ್ತು ಪೌರಿ ಜಿಲ್ಲೆಗಳಿಗೆ ಅತ್ಯಂತ ಭಾರಿ ಮಳೆಯಾಗುವ ರೆಡ್ ಅಲರ್ಟ್ ಘೋಷಿಸಿದ್ದರೆ, ಉತ್ತರಕಾಶಿ, ಚಮೋಲಿ, ನೈನಿತಾಲ್ ಮತ್ತು ರುದ್ರಪ್ರಯಾಗಗಳಿಗೆ ಆರೆಂಜ್ ಅಲರ್ಟ್ ಹಾಗೂ ಬಾಗೇಶ್ವರ್, ಅಲ್ಮೋರಾ, ಚಂಪಾವತ್, ಉಧಮ್ ಸಿಂಗ್ ನಗರ ಮತ್ತು ಪಿಥೋರಗಢ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಜಾರಿಗೊಳಿಸಿ ಗಂಡಕಿ ಮತ್ತು ಅಲಕನಂದಾ ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಿದೆ.
ಇತ್ತ ಉತ್ತರ ಪ್ರದೇಶದಲ್ಲೂ ಮಳೆಯ ಆರ್ಭಟ ಮುಂದುವರಿದಿದ್ದು, ಲಕ್ನೋ, ಕಾನ್ಪುರ, ಉನ್ನಾವೋ, ಬಾರಾಬಂಕಿ, ಅಯೋಧ್ಯಾ ಮತ್ತು ಜೌನ್‍ಪುರ ಸೇರಿದಂತೆ ಸುಮಾರು 45 ಪ್ರಮುಖ ನಗರಗಳಲ್ಲಿ ಕಳೆದ 65 ಗಂಟೆಗಳಿಂದ ಬಿಡುವಿಲ್ಲದೆ ಭಾರಿ ಮಳೆ ಸುರಿಯುತ್ತಿದೆ. ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಚಂಡಮಾರುತದ ಗಾಳಿಯಿಂದಾಗಿ ಸಾವಿರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಸಮಗೊಂಡು ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕಳೆದ ಎರಡು ದಿನಗಳಲ್ಲಿ ಮಳೆ,
ಸಿಡಿಲು ಹಾಗೂ ಗೋಡೆ ಕುಸಿತದಂತಹ ಅನಾಹುತಗಳಿಗೆ ಬಲಿಬಿದ್ದವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ನಿರಂತರ ಮಳೆಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಮತ್ತೊಂದೆಡೆ, ಬಿಹಾರದಲ್ಲಿ ‘ಅರ್ನಾಬ್’ ಚಂಡಮಾರುತದ ಪ್ರಭಾವ ಕೊಂಚ ಕ್ಷೀಣಿಸಿದೆಯಾದರೂ ಕಳೆದ 72 ಗಂಟೆಗಳಿಂದ ರಾಜ್ಯಾದ್ಯಂತ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ನೆರೆಯ ನೇಪಾಳದ ತೆರೈ ಬೆಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಗಂಡಕ್, ಕೋಸಿ ಮತ್ತು ಬಾಗಮತಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ವಾಲ್ಮೀಕಿನಗರ ಬ್ಯಾರೇಜ್‍ನಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.





















