
ನವದೆಹಲಿ,ಸೆ.21-ಮತ್ತು ಕಠಿಣ ಅಮೆರಿಕನ್ ನಿರ್ಬಂಧಗಳ ಪರಿಣಾಮವಾಗಿ ಇರಾನ್ನ ಆರ್ಥಿಕತೆಯು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಗಣನೀಯವಾಗಿ ಕುಸಿದಿದೆ ಹಾಗೂ ಹಣದುಬ್ಬರ ದರವು ಭಾರತಕ್ಕಿಂತ ಸುಮಾರು 15 ಪಟ್ಟು ಹೆಚ್ಚಾಗಿದೆ. ಇರಾನ್ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ಪರ್ಷಿಯನ್ ಕ್ಯಾಲೆಂಡರ್ನ ಮೊದಲ ತ್ರೈಮಾಸಿಕವಾದ ಮಾರ್ಚ್ ಅಂತ್ಯದಿಂದ ಜೂನ್ ಅಂತ್ಯದ ಅವಧಿಯಲ್ಲಿ, ಯುಎಸ್ ಮತ್ತು ಇಸ್ರೇಲ್ನೊಂದಿಗಿನ ಸಂಘರ್ಷದ ನಡುವೆಯೇ ದೇಶದ ಜಿಡಿಪಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 10.1 ರಷ್ಟು ಭಾರಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಇರಾನ್ ತನ್ನ ಪ್ರಸ್ತುತ ನಿಲುವನ್ನು ಮರುಪರಿಶೀಲಿಸಿ ಯುದ್ಧವನ್ನು ಕೊನೆಗೊಳಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿನ ಪ್ರಕಾರ 2026 ರಲ್ಲಿ ಇರಾನ್ನ ನೈಜ ಜಿಡಿಪಿ ಶೇಕಡಾ 5.4 ರಷ್ಟು ಕುಸಿಯಲಿದ್ದು, ಸರಾಸರಿ ಹಣದುಬ್ಬರವು ಶೇಕಡಾ 68.9 ತಲುಪಲಿದೆ. ಆಗಸ್ಟ್ 2026 ರಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಶೇಕಡಾ 4.82 ರಷ್ಟಿದ್ದ ಪರಿಣಾಮ, ಇರಾನ್ನ 12 ತಿಂಗಳ ಸರಾಸರಿ ಹಣದುಬ್ಬರ ದರವಾದ ಶೇಕಡಾ 69.9 ಭಾರತಕ್ಕಿಂತ ಸುಮಾರು 14.3 ಪಟ್ಟು ಹೆಚ್ಚಾಗಿದೆ. ಇರಾನ್ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ವ್ಯಕ್ತಪಡಿಸಿದಂತೆ, ತೈಲ ಮತ್ತು ಅನಿಲ ರಫ್ತಿನ ಮೇಲಿನ ಹೊಸ ದಿಗ್ಬಂಧನಗಳು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಕಡಿತಗೊಂಡಿರುವುದು ದೇಶದ ವಿದೇಶಿ ಕರೆನ್ಸಿ ಸಂಗ್ರಹವನ್ನು ಸಂಪೂರ್ಣವಾಗಿ ಕುಸಿದುಬೀಳುವಂತೆ ಮಾಡಿದೆ. ರಾಯಿಟರ್ಸ್ ವರದಿಯ ಪ್ರಕಾರ, ಇರಾನ್ನ ಕಚ್ಚಾ ತೈಲ ಲೋಡ್ ಮಾರ್ಚ್ನಲ್ಲಿ ದಿನಕ್ಕೆ 2 ಮಿಲಿಯನ್ ಬ್ಯಾರೆಲ್ಗಳಷ್ಟಿದ್ದುದು ಆಗಸ್ಟ್ ವೇಳೆಗೆ ಕೇವಲ 220,000 ದಿಂದ 255,000 ಬ್ಯಾರೆಲ್ಗಳಿಗೆ ಇಳಿಕೆಯಾಗಿದೆ.
ಇರಾನ್ ಕರೆನ್ಸಿಯ ಮೌಲ್ಯವು ತೀವ್ರವಾಗಿ ಕುಸಿದಿದ್ದು, ಸೆಪ್ಟೆಂಬರ್ ಆರಂಭದ ವೇಳೆಗೆ ಮುಕ್ತ ಮಾರುಕಟ್ಟೆಯಲ್ಲಿ ಒಂದು ಅಮೆರಿಕನ್ ಡಾಲರ್ ಮೌಲ್ಯವು 2.2 ಮಿಲಿಯನ್ ರಿಯಾಲ್ಗಳನ್ನು ದಾಟಿದೆ. ಕಳೆದ ವರ್ಷದ ಆಗಸ್ಟ್ಗೆ ಹೋಲಿಸಿದರೆ ಗ್ರಾಹಕ ಬೆಲೆಗಳು ಶೇಕಡಾ 89 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಆಹಾರ ಪದಾರ್ಥಗಳ ಬೆಲೆಗಳು ಜನಸಾಮಾನ್ಯರಿಗೆ ಎಟುಕದಂತಾಗಿವೆ. ಯುದ್ಧದ ಪ್ರಭಾವದಿಂದಾಗಿ ದೇಶದ ಕೈಗಾರಿಕಾ ವಲಯವೂ ಸಂಕಷ್ಟದಲ್ಲಿದ್ದು, ಆಗಸ್ಟ್ನಲ್ಲಿ ಕಚ್ಚಾ ವಸ್ತುಗಳ ಸ್ಟಾಕ್ ಸೂಚ್ಯಂಕವು 39.3 ಕ್ಕೆ ಮತ್ತು ಆರ್ಥಿಕ ಪಿ ಎಮ್ ಐ 46.9 ಕ್ಕೆ ಕುಸಿದಿದೆ. ಪಿ ಎಮ್ ಐ 50 ಕ್ಕಿಂತ ಕಡಿಮೆಯಿರುವುದು ಆರ್ಥಿಕ ಚಟುವಟಿಕೆಗಳ ತೀವ್ರ ಹಿಂಜರಿತವನ್ನು ಸೂಚಿಸುತ್ತಿದ್ದು, ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಹಲವು ಕಾರ್ಖಾನೆಗಳು ಉತ್ಪಾದನೆಯನ್ನು ಸ್ಥಗಿತಗೊಳಿಸುವ ಅಥವಾ ಸಂಪೂರ್ಣವಾಗಿ ಮುಚ್ಚಲ್ಪಡುವ ಆತಂಕದಲ್ಲ ಮುಳುಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉತ್ಪಾದನಾ ಸಾಮಥ್ರ್ಯವು ಕ್ಷೀಣಿಸಿ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ವಿಕೋಪಕ್ಕೆ ಹೋಗಲಿದ್ದು, ಇದನ್ನು ತಡೆಯಲು ಇರಾನ್ ತಕ್ಷಣವೇ ಯುದ್ಧವನ್ನು ತಡೆಯುವುದು ಅನಿವಾರ್ಯವಾಗಿದೆ.































