Home ಸುದ್ದಿ ರಾಷ್ಟ್ರೀಯ ಇಟಲಿ ಶಾಲೆಗಳಲ್ಲಿ ಬುರ್ಖಾ ನಿಕಾಬ್ ನಿಷೇಧ

ಇಟಲಿ ಶಾಲೆಗಳಲ್ಲಿ ಬುರ್ಖಾ ನಿಕಾಬ್ ನಿಷೇಧ

ರೋಮ್,ನ.28-ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನೇತೃತ್ವದ ಸರ್ಕಾರವು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರುವ ಹೊಸ ಕಾನೂನಿಗೆ ಸಂಸತ್ತಿನ ಅನುಮೋದನೆ ಪಡೆದಿದೆ.
ಈ ನೂತನ ನಿಯಮದ ಪ್ರಕಾರ ಶಾಲೆಗಳ ಆವರಣದಲ್ಲಿ ಮತ್ತು ತರಗತಿಗಳಲ್ಲಿ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಬುರ್ಖಾ ಮತ್ತು ನಿಕಾಬ್ ಧರಿಸುವುದನ್ನು ನಿಷೇಧಿಸಲಾಗಿದೆ.


ಇದರ ಜೊತೆಗೆ ಶಾಲೆಗಳ ಮೊದಲನೇ ತರಗತಿಯಲ್ಲಿ ವಿದೇಶಿ ಮೂಲದ ವಿದ್ಯಾರ್ಥಿಗಳ ದಾಖಲಾತಿಯನ್ನು ಶೇಕಡಾ 30ಕ್ಕೆ ಸೀಮಿತಗೊಳಿಸಲಾಗಿದೆ.
ಇಟಲಿ ಸಂಸತ್ತಿನ ಕೆಳಮನೆಯಾದ ಚಬರ್ ಆಫ್ ಡೆಪ್ಯೂಟೀಸ್ ಈ ಮಸೂದೆಗೆ 142 ಮತಗಳ ಬೆಂಬಲದೊಂದಿಗೆ ಅನುಮೋದನೆ ನೀಡಿದೆ. ಇದಕ್ಕೂ ಮೊದಲು ಮೇಲ್ಮನೆಯಾದ ಸೆನೆಟ್ ಕೂಡ ಈ ಕಾನೂನನ್ನು ಅಂಗೀಕರಿಸಿತ್ತು. ಹೊಸ ನಿಯಮದ ಅಡಿಯಲ್ಲಿ ಶಾಲಾ ಚಟುವಟಿಕೆಗಳ ಸಮಯದಲ್ಲಿ ವಿದ್ಯಾರ್ಥಿಗಳ ಗುರುತು ಪತ್ತೆಹಚ್ಚಲು ಅಡ್ಡಿಯಾಗುವ ಯಾವುದೇ ಉಡುಪುಗಳನ್ನು ಧರಿಸುವಂತಿಲ್ಲ. ಆದರೆ ಮುಖ ಕಾಣುವಂತೆ ಧರಿಸುವ ಹಿಜಾಬ್‍ಗೆ ಈ ನಿಷೇಧ ಅನ್ವಯಿಸುವುದಿಲ್ಲ ಮತ್ತು ಆರೋಗ್ಯದ ಕಾರಣಗಳಿದ್ದರೆ ವಿನಾಯಿತಿ ನೀಡಲಾಗಿದೆ.
ನಿಯಮ ಉಲ್ಲಂಘಿಸಿದರೆ 200 ರಿಂದ 1000 ಯುರೋಗಳವರೆಗೆ ದಂಡ ವಿಧಿಸಲಾಗುವುದು ಹಾಗೂ ಅಪ್ರಾಪ್ತ ವಿದ್ಯಾರ್ಥಿಗಳ ವಿಚಾರದಲ್ಲಿ ಪೆÇೀಷಕರು ದಂಡ ಪಾವತಿಸಬೇಕಾಗುತ್ತದೆ.


ವಿದೇಶಿ ವಿದ್ಯಾರ್ಥಿಗಳ ಮೇಲಿನ ಶೇಕಡಾ 30ರ ಮಿತಿಯು ಇಟಾಲಿಯನ್ ಭಾಷೆಯ ಜ್ಞಾನವಿಲ್ಲದ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಇಟಾಲಿಯನ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ವಿದೇಶಿ ಮೂಲದ ವಿದ್ಯಾರ್ಥಿಗಳಿಗೆ ಈ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟಪಡುವ ವಿದೇಶಿ ಮಕ್ಕಳ ಪೆÇೀಷಕರಿಗೆ ಉಚಿತವಾಗಿ ಇಟಾಲಿಯನ್ ಭಾಷಾ ತರಗತಿಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ.
ಈ ಕಾನೂನಿಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಂಸತ್ತಿನಲ್ಲಿ ಮತದಾನದ ವೇಳೆ ಪ್ರತಿಪಕ್ಷಗಳ ಸಂಸದರು ಶಾಲೆಯಲ್ಲಿ ಯಾರೂ ವಿದೇಶಿಯರಲ್ಲ ಎಂಬ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.


ಸರ್ಕಾರದ ಈ ನಿರ್ಧಾರವು ವಿದ್ಯಾರ್ಥಿಗಳ ನಡುವೆ ತಾರತಮ್ಯ ಮತ್ತು ವಿಭಜನೆಗೆ ಕಾರಣವಾಗುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಆದರೆ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡಲು ಮತ್ತು ವಿದೇಶಿ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಈ ಸುಧಾರಣೆ ಅಗತ್ಯವಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.