
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ 25: ನಗರದ ದುರ್ಗಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿರುವ ಸೇತುವೆ ಮೇಲಿನ “ಸುವರ್ಣ ಬಳ್ಳಾರಿ” ನಾಮಫಲಕ ಹಾನಿಗೊಳಗಾದ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ಇಂದು ಸಂಬಂಧಪಟ್ಟ ಆಡಳಿತ ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಆರಂಭಿಸಿದೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆಯ ಮೇಲಿನ ನಾಮಫಲಕ ತುಂಡಾಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. “ಸಾರ್ವಜನಿಕ ಆಸ್ತಿ ನಮ್ಮದೇ… ಕಾಪಾಡುವುದು ನಮ್ಮ ಕರ್ತವ್ಯ” ಎಂದು ನಾಗರಿಕರು ಮನವಿ ಮಾಡಿದ್ದಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನೂ ಪ್ರಶ್ನಿಸಿದ್ದರು.
ಈ ಬೆಳವಣಿಗೆಯ ನಂತರ ಇಂದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ನಾಮಫಲಕವನ್ನು ಪರಿಶೀಲಿಸಿ ತುರ್ತು ದುರಸ್ತಿ ಕಾರ್ಯ ಕೈಗೊಂಡರು. ಮುರಿದುಹೋಗಿದ್ದ ಭಾಗಗಳನ್ನು ತೆರವುಗೊಳಿಸಿ ಮರು ಅಳವಡಿಕೆ ಕಾರ್ಯವನ್ನು ಆರಂಭಿಸಿರುವುದು ಕಂಡುಬಂದಿತು.
ಸ್ಥಳೀಯರು ಹೇಳುವಂತೆ, ಸಾರ್ವಜನಿಕರ ಒತ್ತಡ ಹಾಗೂ ಮಾಧ್ಯಮಗಳಲ್ಲಿ ವಿಷಯ ಪ್ರಸ್ತಾಪವಾದ ನಂತರವೇ ಆಡಳಿತ ಚುರುಕುಗೊಂಡಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸೇತುವೆ ಸೇರಿದಂತೆ ಸಾರ್ವಜನಿಕ ಆಸ್ತಿಗಳ ಭದ್ರತೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಇದಲ್ಲದೆ, ನಾಮಫಲಕ ಹಾನಿಗೆ ಕಾರಣರಾದವರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
“ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಮಿಸುವುದಷ್ಟೇ ಸಾಲದು, ಅವುಗಳನ್ನು ಸಮರ್ಪಕವಾಗಿ ಸಂರಕ್ಷಿಸುವ ಜವಾಬ್ದಾರಿಯೂ ಆಡಳಿತದ ಮೇಲಿದೆ” ಎಂಬ ಮಾತು ಇದೀಗ ಮತ್ತೆ ಕೇಳಿಬರುತ್ತಿದೆ.























