Home Uncategorized ಸನ್ಮಾರ್ಗ ಗೆಳೆಯರ ಬಳಗ ನಾರಾಯಣ ಸೇವಾ ಸಂಸ್ಥೆಯಿಂದ ವಿಕಲಚೇತನರಿಗೆ ಕೃತಕ ಕೈ-ಕಾಲು ಜೋಡಣೆ ಶಿಬಿರ

ಸನ್ಮಾರ್ಗ ಗೆಳೆಯರ ಬಳಗ ನಾರಾಯಣ ಸೇವಾ ಸಂಸ್ಥೆಯಿಂದ ವಿಕಲಚೇತನರಿಗೆ ಕೃತಕ ಕೈ-ಕಾಲು ಜೋಡಣೆ ಶಿಬಿರ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಅ.25: ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಕೈ-ಕಾಲು ಕಳೆದುಕೊಂಡು ಸಂಕಷ್ಟದ ಬದುಕು ನಡೆಸುತ್ತಿರುವ ಅಂಗವಿಕಲರಿಗೆ ನೆರವಾಗುವ ಉದ್ದೇಶದಿಂದ ನಗರದ ಸನ್ಮಾರ್ಗ ಗೆಳೆಯರ ಬಳಗ ಹಾಗೂ ರಾಜಸ್ಥಾನದ ಉದಯಪುರದ ನಾರಾಯಣ ಸೇವಾ ಸಂಸ್ಥೆ ಸಹಯೋಗದಲ್ಲಿ ಬೃಹತ್ ಕೃತಕ ಕೈ-ಕಾಲು ಜೋಡಣೆ ಶಿಬಿರ ನಗರಲ್ಲಿಂದು ಹಮ್ಮಿಕೊಳ್ಳಲಾಗಿತ್ತು.

ಶಿಬಿರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗು ಹೊರ

ರಾಜ್ಯಗಳಿಂದಲೂ 700ಕ್ಕೂ ಅಧಿಕ ವಿಕಲಚೇತನರು ಆಗಮಿಸಿದ್ದರು ಇವರಿಗೆ, ಕೃತಕ ಕೈ-ಕಾಲು ಜೋಡಣೆ ಕಾರ್ಯ ನಡೆಯಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು, ಅಂಗವಿಕಲರ ಸೇವೆ ಅತ್ಯಂತ ಶ್ರೇಷ್ಠವಾದ ಮಾನವೀಯ ಕಾರ್ಯವಾಗಿದೆ. ದೈಹಿಕ ಅಂಗವೈಕಲ್ಯದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಕೃತಕ ಕೈ-ಕಾಲುಗಳನ್ನು ಜೋಡಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯುತ್ತಿದೆ ಎಂದರು.

ಮೇಯರ್ ಪಿ. ಗಾದೆಪ್ಪ ಮಾತನಾಡಿ, ನೂರಾರು ಅಂಗವಿಕಲರನ್ನು ಒಂದೆಡೆ ಸೇರಿಸಿ ಅವರಿಗೆ ಅಗತ್ಯವಿರುವ ಕೃತಕ ಕೈ-ಕಾಲುಗಳ ಜೋಡಣೆಗೆ ವ್ಯವಸ್ಥೆ ಮಾಡಿರುವುದು ಸುಲಭದ ಕೆಲಸವಲ್ಲ. ಈ ಬೃಹತ್ ಶಿಬಿರದ ಯಶಸ್ಸಿಗಾಗಿ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವಾ ಮನೋಭಾವ ಇತರ ಸಂಘಟನೆಗಳಿಗೂ ಮಾದರಿಯಾಗಿದೆಂದರು.

ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ ಮಾತನಾಡಿ, ಅಂಗವಿಕಲರ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಉದಯಪುರದ ನಾರಾಯಣ ಸೇವಾ ಸಂಸ್ಥೆಯ ಸೇವಾ ಕೈಂಕರ್ಯ ಅನುಕರಣೀಯವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಬಿರಕ್ಕೆ ಭೇಟಿ ನೀಡಿ ಕೃತಕ ಕೈ-ಕಾಲು ಜೋಡಣೆ ಕಾರ್ಯವನ್ನು ವೀಕ್ಷಿಸಿದರು. ಅಂಗವಿಕಲರಿಗೆ ನೆರವಾಗುವ ನಿಟ್ಟಿನಲ್ಲಿ ಸನ್ಮಾರ್ಗ ಗೆಳೆಯರ ಬಳಗ ಕೈಗೊಂಡಿರುವ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಡಿವೈಎಸ್ಪಿ ಪ್ರಸಾದ ಗೋಖಲೆ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ವೆಂಕಟೇಶಮೂರ್ತಿ, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ ಗುಡಿಗಂಟಿ, ಹನುಮಂತಪ್ಪ, ಸನ್ಮಾರ್ಗ ಗೆಳೆಯರ ಬಳಗದ ಜಗದೀಶ್, ಹನುಮಂತರೆಡ್ಡಿ, ಚಂದ್ರಶೇಖರ ಆಚಾರ್ ಕಪ್ಪಗಲ್, ಅಶೋಕ್ ಭಂಡಾರಿ ಮೊದಲದವರು ಇದ್ದರು.