Home ಜಿಲ್ಲೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಕರೆ

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಕರೆ

ಸಂಜೆವಾಣಿ ವಾರ್ತೆ

ಬಳ್ಳಾರಿ ಜೂ. 16: ವಿದ್ಯಾರ್ಥಿ ಜೀವನ ಬಂಗಾರದ ದಿನಗಳ ಜೀವನ, ನೀವು ನಿಮ್ಮ ಪದವಿ ಮುಗಿಸಿಕೊಂಡು ಇನ್ನೂ ಉನ್ನತ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಉದ್ಯೋಗ ಪಡೆದು ನಿಮ್ಮ ತಾಯಿ ತಂದೆಗಳಿಗೆ, ವಿದ್ಯೆ ಕಲಿಸಿದ  ಸಂಸ್ಥೆಗೆ ಹೆಸರು ತರುವಂತಹ ಈ ದೇಶದ ಸತ್ಪ್ರಜೆಗಳಾಗಿ ಬಾಳಿರಿ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ  ಪಿ ಗಾದೆಪ್ಪ ಅವರು ಅಭಿಪ್ರಾಯ ಪಟ್ಟರು. ಶನಿವಾರ ನಗರದ ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಲಾಡ್ರ್ಸ್ ವಿದ್ಯಾಸಂಸ್ಥೆಯ ಇಂಡೋ-ಅಮೆರಿಕನ್ ಪದವಿ ಕಾಲೇಜು ವಿದ್ಯಾರ್ಥಿಗಳ ಬಿಳ್ಕೋಡಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಆರಂಭದಲ್ಲಿ ಲಾಡ್ರ್ಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪಿ ಎಚ್ ನಾಯ್ಡು ಅವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ಇಂದು AIಯ (ಕೃತಕ ಬುದ್ಧಿಮತ್ತೆ) ಅವಶ್ಯಕತೆ ತುಂಬಾ ಇದ್ದು ಇದರ ಜ್ಞಾನವನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಇಂದಿನ AI ತಂತ್ರಜ್ಞಾನಕ್ಕೆ  ಹೊಂದಿಕೊಳ್ಳಬೇಕು ಎಂದು ಕರೆಕೊಟ್ಟು ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯ ಸುಖಮಯವಾಗಿರಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಳ್ಳಾರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಎನ್ ನವೀನ ಕುಮಾರ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಪಡೆದು ಸಾಮಾನ್ಯ ಉದ್ಯೋಗಗಳನ್ನು ಮಾಡುವುದರ ಬದಲು I A S , I P S , I F S  ಮುಂತಾದ ಸ್ಪರ್ಧಾತ್ಮಕ ಜಗತ್ತಿನ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಕಿವಿ ಮಾತು ಹೇಳಿದರು.

ಸದರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಶೇಕ್ ಸಲೀಮ್  ಬಾಷಾ ಅವರು ಮಾತನಾಡುತ್ತಾ ವಿದ್ಯಾರ್ಥಿಗಳ ಜೊತೆಗಿನ ಸವಿನೆನಪುಗಳನ್ನು ಮೆಲಕು ಹಾಕಿದರು ಮತ್ತು ಶುಭವನ್ನು ಕೋರಿದರು.

ವೇದಿಕೆಯಲ್ಲಿ ಕಾಲೇಜಿನ ಉಪ-ಪ್ರಾಚಾರ್ಯರಾದ ಸುಧೀರ ಕುಮಾರ ಕೆ ಪಿ ಹಾಗೂ ಇಂಡೋ-ಅಮೆರಿಕನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಾಜೇಶ ಬಿ.ವಿ ಆಡಳಿತಾಧಿಕಾರಿ ಪಿ ಉದಯ ಭಾಸ್ಕರ ಮತ್ತು  ಪಿ ಆರ್ ಓ ರಾಜ ವಿ ಅವರು ಉಪಸ್ಥಿತರಿದ್ದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಬಸವರಾಜ ಅಮಾತಿ ಕನ್ನಡ ಉಪನ್ಯಾಸಕರು ನೆರವೇರಿಸಿದರು, ಪದವಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ಉಪಸ್ಥಿತರಿದ್ದರು. ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು.