
ಸಂಜೆವಾಣಿ ವಾರ್ತೆ
ಹೊಸಪೇಟೆ.ಸೆ.15 ವಿಜಯನಗರ ಜಿಲ್ಲಾಧ್ಯಂತ ಸೋಮವಾರ ಸಡಗರ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲಾಯಿತು.
ಗಣೇಶ ಹಬ್ಬ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾಧ್ಯಂತ 2200 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಮನೆ ಮನೆಗಳಲ್ಲಿ ಮಾರುಕಟ್ಟೆಯಿಂದ ಗಣೇಶ ಮೂರ್ತಿ ತಂದು ಪ್ರತಿಷ್ಠಾಪನೆ ಮಾಡುತ್ತಿದ್ದದ್ದು ಕಂಡು ಬಂದಿತು. ಗಣೇಶ ಉತ್ಸವ ಹಿನ್ನಲೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಸಂಭ್ರಮದಿಂದ ತೊಡಗಿದ್ದು ಕಂಡು ಬಂದಿತು.
ಹಿಂದೂ ಮಹಾಗಣಪತಿ:
ನಗರದ ಬಳ್ಳಾರಿ ರಸ್ತೆಯಲ್ಲಿ ವಿಜಯನಗರ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 18 ಅಡಿ ಎತ್ತರದ ವರಹ ಗಣಪತಿ ಗಮನ ಸೆಳೆಯಿತು. ಗಣೇಶ ಉತ್ಸವದ ಅಂಗವಾಗಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಸಂಜೆ ಗಂಗಾರತಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಗರದ ಗಲ್ಲಿ ಗಲ್ಲಿಗಳಲ್ಲಿ ಮಂಟಪಗಳನ್ನು ನಿರ್ಮಿಸಿ, ಯುವಕರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ, ಮನೆ ಮನೆಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದರು.
ತೊಟ್ಟಿಲು ಗಣೇಶ:
ನಗರದ ಅಮರಾವತಿಯ ನಿವಾಸಿ ಸಂಜು ಮರೋಳ್ ಎಂಬುವವರ ಮನೆಯಲ್ಲಿ ತೂಗುವ ತೊಟ್ಟಿಲಿನಲ್ಲಿ ಶ್ರೀಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಹೂವುಗಳು ಹಾಗೂ ಎಕ್ಕೆ ಹೂವಿನಿಂದ ಸುಂದರವಾಗಿ ಅಲಂಕರಿಸಲಾಯಿತು. ಸನಾತನ ಹಿಂದೂ ಧರ್ಮದ ಸಂಪ್ರದಾಯ ಹಾಗೂ ಪೂಜಾ ವಿಧಿ ವಿಧಾನಗಳಂತೆ ಗಣೇಶನಿಗೆ ವಿಶೇಷ ಪೂಜೆ ಪುಷ್ಪಾರ್ಚನೆ ಹಾಗೂ ಆರತಿ ನೆರವೇರಿಸಲಾಯಿತು.
ಮಣ್ಣಿನ ಗಣಪತಿ:
ತಾಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಸ್ಥಳೀಯ ಬಾಲಕರು ಮಣ್ಣಿನಲ್ಲಿಯೇ ನೈಸರ್ಗಿಕ ಗಣಪತಿ ನಿರ್ಮಿಸಿ, ಪ್ರತಿಷ್ಠಾಪನೆ ಮಾಡುವ ಮೂಲಕ ಗಮನ ಸೆಳೆದರು.
ಗಣೇಶ ವಿಸರ್ಜನೆ:
ಜಿಲ್ಲಾಧ್ಯಂತ ಜರುಗಿದ ಗಣೇಶ ಉತ್ಸವ ಆಚರಣೆ ಅಂಗವಾಗಿ ಸೋಮವಾರ ಜರುಗಿದ ಮೊದಲ ದಿನದ ಗಣೇಶ ವಿಸರ್ಜನೆಯಲ್ಲಿ 64 ಸಾರ್ವಜನಿಕ ಗಣಪತಿಗಳು ಸೇರಿದಂತೆ ಮನೆ ಮನೆಯಲ್ಲಿ ಸ್ಥಾಪಿಸಿದ್ದ ಸಾವಿರಾರು ಗಣೇಶ ಮೂರ್ತಿಗಳು ಸೋಮವಾರ ಸಂಜೆ ವಿಸರ್ಜನೆಗೊಂಡವು. ನಾಳೆ ಬುಧವಾರ ಮೂರನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮ ಜರುಗಲಿದೆ. ಮೂರನೇ ದಿನದ ಗಣೇಶ ವಿಸರ್ಜನೆಯಲ್ಲಿ ಜಿಲ್ಲಾದ್ಯಂತ 1432 ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳುತ್ತಿವೆ.
ಸಕಲ ಸಿದ್ದತೆ:
ಅತಿಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳುವ ಮೂರನೇ ದಿನದ ಗಣೇಶ ವಿಸರ್ಜನೆಗೆ ಜಿಲ್ಲಾಡಳಿತದ ವತಿಯಿಂದ ಸಕಲ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳುವ ಸ್ಠೇಷನ್ ರಸ್ತೆಯಲ್ಲಿರುವ ಎಲ್.ಎಲ್.ಸಿ ಕಾಲುವೆ ಬಳಿ, ಚಿತ್ತವಾಡ್ಗಿ, ಟಿ.ಬಿ.ಡ್ಯಾಂ, ಸಂಡೂರು ರಸ್ತೆ, ಬಳ್ಳಾರಿ ರಸ್ತೆ, ಹರಿಹರ ರಸ್ತೆ, ಜಂಬುನಾಥ ರಸ್ತೆ ಮೂಲಕ ಹಾದು ಹೋಗುವ ಹೆಚ್.ಎಲ್.ಸಿ ಕಾಲುವೆ ಬಳಿ ಬ್ಯಾರಿಕೇಡ್ ನಿರ್ಮಿಸಿ, ಸಿಸಿ ಕ್ಯಾಮೆರಾ, ಅಳವಡಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಸ್ಥ¼ದಲ್ಲಿ ಭದ್ರತೆಗೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ.































