
ಕೆಜಿಎಫ್, ಸೆ. ೧೮: ನಗರದ ಎಂ.ಜಿ. ಮಾರುಕಟ್ಟೆಯಲ್ಲಿ ಹುಲ್ಲಿನ ಮಾರುಕಟ್ಟೆಯ ಸುಮಾರು ೧೪೦ ಅಂಗಡಿಗಳನ್ನು ತೆರವುಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳು ರಚಿಸಿರುವ ತನಿಖಾ ತಂಡವು ಗುರುವಾರ ಕೆಜಿಎಫ್ ನಗರಸಭೆ ಕಚೇರಿ ಭೇಟಿ ನೀಡಿ ವಿವಿಧ ದಾಖಲೆಗಳು ಹಾಗೂ ಕಡತಗಳನ್ನು ಪರಿಶೀಲಿಸಿತು.
ಹುಲ್ಲಿನ ಮಾರುಕಟ್ಟೆಯಲ್ಲಿದ್ದ ಅಂಗಡಿಗಳನ್ನು ನಗರಸಭೆಯ ಪೌರಾಯುಕ್ತರು ಹಾಗೂ ಸಿಬ್ಬಂದಿ ಕಾನೂನು ಬಾಹಿರವಾಗಿ ತೆರವುಗೊಳಿಸಿದ್ದಾರೆಯೆಂದು ಆರೋಪಿಸಿ ಕೆಪಿಸಿಸಿ ಕಾರ್ಯದರ್ಶಿ ಕಾರ್ತಿಕ್ ಅವರು ಪೌರಾಡಳಿತ ಇಲಾಖೆಗೆ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆ, ಪ್ರಕರಣವನ್ನು ಪರಿಶೀಲಿಸಲು ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖಾ ತಂಡವನ್ನು ರಚಿಸಿ, ಸ್ಥಳೀಯವಾಗಿ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ತನಿಖಾ ತಂಡದಲ್ಲಿ ತುಮಕೂರು ಯೋಜನಾಧಿಕಾರಿ ಯೋಗಾನಂದ, ಶ್ರೀನಿವಾಸಗೌಡ್ ಸೇರಿದಂತೆ ಇತರ ಅಧಿಕಾರಿಗಳಿದ್ದರು.
ತಂಡದ ಅಧಿಕಾರಿಗಳು ನಗರಸಭೆ ಕಚೇರಿಗೆ ಭೇಟಿ ನೀಡಿ, ಹುಲ್ಲಿನ ಮಾರುಕಟ್ಟೆಯ ಅಂಗಡಿಗಳ ತೆರವುಗೆ ಸಂಬಂಧಿಸಿದ ಕಡತಗಳು, ನಗರಸಭೆಯ ದಾಖಲೆಗಳು, ಅನುಮತಿಯು, ನೋಟಿಸ್ಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ತೆರವು ಕಾರ್ಯಾಚರಣೆಯ ಕುರಿತು ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಿದರು. ಹುಲ್ಲಿನ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಸುಮಾರು ೧೪೦ ಅಂಗಡಿಗಳನ್ನು ತೆರವುಗೊಳಿಸುವ ಮುನ್ನ ಅಂಗಡಿ ಮಾಲೀಕರಿಗೆ ಸೂಕ್ತ ನೋಟೀಸ್ ನೀಡಲಾಗಿಲ್ಲ ಎಂಬುದೂ ದೂರುದಾರ ಕಾರ್ತಿಕ್ ಅವರ ಪ್ರಮುಖ ಆರೋಪವಾಗಿದೆ. ಅಂಗಡಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅಲ್ಲಿದ್ದ ಬೆಲೆಬಾಳುವ ವಸ್ತುಗಳು, ವ್ಯಾಪಾರ ಸಾಮಗ್ರಿಗಳು ಹಾಗೂ ಇತರ ಸ್ವತ್ತುಗಳನ್ನು ಎಲ್ಲಿಗೆ ಸಾಗಿಸಲಾಗಿದೆ ಎಂಬುದರ ಕುರಿತು ಅಂಗಡಿ ಮಾಲೀಕರಿಗೆ ಸಮರ್ಪಕ ಮಾಹಿತಿ ನೀಡಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಅಂಗಡಿಗಳ ತೆರವು ಕಾರ್ಯಾಚರಣೆ ಯಿಂದ ಸಣ್ಣ ವ್ಯಾಪಾರಿಗಳು ಮತ್ತು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ, ತಮ್ಮ ಜೀವನೋಪಾಯ ಕಳೆದುಕೊಂಡಿರುವುದಾಗಿ ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೌರಾಡಳಿತ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ತಂಡ ರಚಿಸಿರುವುದು ಈಗ ಸ್ಥಳೀಯವಾಗಿ ಗಮನ ಸೆಳೆದಿದೆ. ತನಿಖಾ ತಂಡವು ನಗರಸಭೆ ಅಧಿಕಾರಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದೆ. ಅಂಗಡಿಗಳ ತೆರವುಗೊಳಿಸುವಿಕೆಗೆ ಸಂಬಂಧಿಸಿದಂತೆ ನಗರಸಭೆ ಕೈಗೊಂಡ ಕ್ರಮ, ಜಾರಿಗೊಳಿಸಲಾದ ಆದೇಶಗಳು, ನೋಟಿಸ್ಗಳಿದ್ದವೆಯೇ, ತೆರವು ಕಾರ್ಯಾಚರಣೆಗೆ ಅನುಸರಿಸಲಾದ ನಿಯಮಗಳು ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ನಡುವೆ, ಪ್ರಕರಣದ ಕುರಿತು ನಗರಸಭೆ ಅಧಿಕಾರಿಗಳ ನಿಲವು ಹಾಗೂ ತನಿಖಾ ತಂಡದ ಅಂತಿಮ ವರದಿ ಏನಾಗಿರಲಿದೆ ಎಂಬುದನ್ನು ಸಾರ್ವಜನಿಕರು ಎದುರುಬಿಡುತ್ತಿದ್ದಾರೆ.




























