Home ಜಿಲ್ಲೆ ಬೆಂಗಳೂರು ಕ್ರಷರ್ ಮಾಲೀಕರ ಮುಷ್ಕರಕ್ಕೆ ಕೋಲಾರ ಕ್ರಷರ್ ಮಾಲೀಕರ ಬೆಂಬಲ

ಕ್ರಷರ್ ಮಾಲೀಕರ ಮುಷ್ಕರಕ್ಕೆ ಕೋಲಾರ ಕ್ರಷರ್ ಮಾಲೀಕರ ಬೆಂಬಲ

ಕೋಲಾರ, ಸೆ. ೧೮: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಗಳನ್ನು ತಿದ್ದುಪಡಿ ಮಾಡಿ ಏಕಮುಖ ರಾಜಧನ ಸಂಗ್ರಹಣಾ ವ್ಯವಸ್ಥೆ ಜಾರಿಗೆ ತರುವಂತೆ ಆಗ್ರಹಿಸಿ ರಾಜ್ಯ ಕ್ರಷರ್ ಮಾಲೀಕರ ಒಕ್ಕೂಟ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕೋಲಾರ ಜಿಲ್ಲಾ ಕ್ರಷರ್ ಮಾಲೀಕರ ಸಂಘ ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ಸಂಘದ ಅಧ್ಯಕ್ಷ ಕೆ. ಎಸ್. ವೆಂಕಟೇಶ್ ಗೌಡ ತಿಳಿಸಿದರು.


ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಕೈಗೊಂಡ ಮಹತ್ವದ ತೀರ್ಮಾನದಂತೆ ಸೆಪ್ಟೆಂಬರ್ ೧೮ರ ಶುಕ್ರವಾರ ಬೆಳಿಗ್ಗೆ ೮ ಗಂಟೆಯಿಂದ ಜಿಲ್ಲೆಯಲ್ಲಿ ಕಲ್ಲು ಕ್ವಾರಿ ಹಾಗೂ ಕ್ರಷರ್ ಘಟಕಗಳ ಕಾರ್ಯಗಳು ಮತ್ತು ಮಾರಾಟ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.


ಮುಷ್ಕರದ ಅವಧಿಯಲ್ಲಿ ಜಲ್ಲಿ ಮತ್ತು ಎಂ-ಸ್ಯಾಂಡ್ ಉತ್ಪನ್ನಗಳ ಸರಬರಾಜು ಮತ್ತು ಸಾಗಣೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಯಾವುದೇ ಕಾರಣಕ್ಕೂ ಸರಕುಗಳು ರಸ್ತೆಗಿಳಿಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಅವೈಜ್ಞಾನಿಕ ನಿಯಮಾವಳಿಗಳಿಂದ ಕ್ರಷರ್ ಮಾಲೀಕರು ಎದುರಿಸುತ್ತಿರುವ ಸಂಕಷ್ಟಗಳನ್ನು ಸರ್ಕಾರ ಕೂಡಲೇ ಅರಿತುಕೊಂಡು, ಏಕಮುಖ ರಾಯಲ್ಟಿ ಪದ್ಧತಿಯನ್ನು ಜಾರಿಗೊಳಿಸಬೇಕು. ಈ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಜಿಲ್ಲೆಯಲ್ಲಿ ಯಾವುದೇ ಉತ್ಪಾದನೆ ಮತ್ತು ಮಾರಾಟ ಕಾರ್ಯಗಳು ನಡೆಯುವುದಿಲ್ಲ.


ಜಿಲ್ಲೆಯ ಎಲ್ಲಾ ಕ್ವಾರಿ ಮತ್ತು ಕ್ರಷರ್ ಮಾಲೀಕರು ವದಂತಿ ಅಥವಾ ಅಪಪ್ರಚಾರಗಳಿಗೆ ಕಿವಿಗೊಡದೆ ಸ್ವಯಂಪ್ರೇರಿತರಾಗಿ ಈ ಅನಿರ್ದಿಷ್ಟಾವಧಿ ಬಂದ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದು, ಸಮಸ್ಯೆ ಇತ್ಯರ್ಥವಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಕೋಲಾರ ಕ್ವಾರಿ ಮತ್ತು ಕ್ರಷರ್ ಓನರ್ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ರಾಜ್ಯಾಧ್ಯಕ್ಷರ ಆದೇಶದಂತೆ ಕೇಂದ್ರದ ಮುಂದಿನ ಆದೇಶದವರೆಗೆ ಸೆ. ೧೮ರ ಬೆಳಿಗ್ಗೆ ೮ ಗಂಟೆಯಿಂದ ಜಿಲ್ಲೆಯಾದ್ಯಂತ ಕ್ರಷರ್‌ಗಳು ಬಂದ್ ಇರುತ್ತದೆ ಎಂಬುದಾಗಿ ತೀರ್ಮಾನಿಸಿದ್ದಾರೆ.