Home ಜಿಲ್ಲೆ ವಿಜಯನಗರ ಕಾಲೇಜಿನಲ್ಲಿ ವಿವಿಧ ಸಂಘಗಳ ಸಮಾರೋಪ ಹಾಗೂ ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆ

ವಿಜಯನಗರ ಕಾಲೇಜಿನಲ್ಲಿ ವಿವಿಧ ಸಂಘಗಳ ಸಮಾರೋಪ ಹಾಗೂ ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಜೂ. 1 : ವೀರಶೈವ ವಿದ್ಯಾವರ್ಧಕ ಸಂಘದ ವಿಜಯನಗರ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ವತಿಯಿಂದ 2025-26ನೇ ಸಾಲಿನ ವಿವಿಧ ಸಂಘಗಳ ಸಮಾರೋಪ ಸಮಾರಂಭ ಹಾಗೂ ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆ-2026ರ ಬಿಡುಗಡೆ ಕಾರ್ಯಕ್ರಮವು ಶನಿವಾರ ನಗರದ ಸುವರ್ಣ ಭವನದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಎನ್. ಮೇಟ್ರಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಪ್ರಭಾಕರ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಹಾಂತೇಶ ಎನ್. ಆರಾಧ್ಯಮಠ ವಹಿಸಿದ್ದರು.

ಆರಂಭದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ರವಿ ಕಿರಣ್ ಡಿ. ಅವರು ಅತಿಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾಲೇಜಿನ ವಿವಿಧ ಸಂಘಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ವಹಿಸಿರುವ ಪಾತ್ರವನ್ನು ವಿವರಿಸಿದರು.

ಬಳಿಕ ಪ್ರಾಂಶುಪಾಲರಾದ ಶ್ರೀ ಮಹಾಂತೇಶ ಎನ್. ಆರಾಧ್ಯಮಠ ಅವರು ವಾರ್ಷಿಕ ವರದಿಯನ್ನು ಮಂಡಿಸಿ, 2025-26ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಸಾಧಿಸಿದ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ವಿಸ್ತರಣಾ ಚಟುವಟಿಕೆಗಳ ಪ್ರಮುಖ ಸಾಧನೆಗಳನ್ನು ವಿವರಿಸಿದರು. ವಿವಿಧ ಸಂಘಗಳಾದ ವಾಣಿಜ್ಯ ಮತ್ತು ನಿರ್ವಹಣಾ ಸಂಘ, ವಿಜ್ಞಾನ ಸಂಘ, ಕರ್ನಾಟಕ ಸಂಘ, ಯುಟೋಪಿಯನ್ ಕ್ಲಬ್, ಕ್ರೀಡಾ ಕ್ಲಬ್, ಎನ್ಎಸ್ಎಸ್, ಎನ್ಸಿಸಿ ಸೇರಿದಂತೆ ವಿವಿಧ ಘಟಕಗಳು ಆಯೋಜಿಸಿದ ಕಾರ್ಯಕ್ರಮಗಳ ಯಶಸ್ಸನ್ನು ಅವರು ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆ-2026ನ್ನು ಗಣ್ಯರು ಬಿಡುಗಡೆಗೊಳಿಸಿದರು. ಸ್ಮರಣ ಸಂಚಿಕೆಯಲ್ಲಿ ಕಾಲೇಜಿನ ವಾರ್ಷಿಕ ಚಟುವಟಿಕೆಗಳು, ವಿದ್ಯಾರ್ಥಿಗಳ ಸಾಹಿತ್ಯಿಕ ಬರಹಗಳು, ಸಾಧನೆಗಳು ಹಾಗೂ ವಿವಿಧ ವಿಭಾಗಗಳ ವರದಿಗಳನ್ನು ಒಳಗೊಂಡಿರುವುದಾಗಿ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜು ಹಾಗೂ ವಿವಿಧ ಇತರೆ ಕಾಲೇಜುಗಳು ಆಯೋಜಿಸಿದ್ದ ಸ್ಪರ್ಧೆಗಳು,

ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು, ಪದಕಗಳು ಹಾಗೂ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಧ್ಯಕ್ಷರು, ಅತಿಥಿಗಳು ಹಾಗೂ ಪ್ರಾಂಶುಪಾಲರು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.

ತಮ್ಮ ಸಂದೇಶದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಎನ್. ಮೇಟ್ರಿ ಅವರು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ನಾಯಕತ್ವ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಸದಸ್ಯರಾದ ಶ್ರೀ ಪ್ರಭಾಕರ ಅವರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.