Home ಜಿಲ್ಲೆ ವಿ.ಎಸ್.ಕೆ ವಿವಿ ಹಾಸ್ಟೆಲ್ ಸಮಸ್ಯೆಗಳ ನಿವಾರಣೆಯ ಭರವಸೆ

ವಿ.ಎಸ್.ಕೆ ವಿವಿ ಹಾಸ್ಟೆಲ್ ಸಮಸ್ಯೆಗಳ ನಿವಾರಣೆಯ ಭರವಸೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.17: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಎಸ್ಸಿ/ಎಸ್ಟಿ ವಸತಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ಖಂಡಿಸಿ, ಎಐಡಿಎಸಓ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಮುಂದೆ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ನಿನ್ನೆ ಶನಿವಾರದಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ರಾಜೇಶ್ವರಿ ಮೇಡಂ ಅವರು ಭೇಟಿ ನೀಡಿ, ಎಸ್ಸಿ/ಎಸ್ಟಿ ವಸತಿ ನಿಲಯಗಳ ಕಳಪೆ ಗುಣಮಟ್ಟದ ಆಹಾರ, ನೈರ್ಮಲ್ಯ ಇಲ್ಲದಿರುವುದು ಹಾಗೂ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಆಗಿರುವ ಬದಲಾವಣೆಗಳು ಮತ್ತು ಚರ್ಮದ ಸಮಸ್ಯೆಗಳನ್ನು ಗಮನಿಸಿ, ನೀರಿನ ಶುಚಿತ್ವ ಇಲ್ಲದಿರುವುದನ್ನು ಗಮನಿಸಿದರು.

ಹಾಗೂ ವಿಶ್ವವಿದ್ಯಾನಿಲಯದ ಎಸ್ಸಿ/ಎಸ್ಟಿ ವಸತಿ ನಿಲಯಗಳ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸುವ ಕುರಿತು ಹಾಗೂ ಸಮಸ್ಯೆಗಳ ನಿವಾರಣೆಯ ಕುರಿತು ಮಂಗಳವಾರ ದಿನಾಂಕ 19 ಮೇ 2026 ರಂದು ವಸತಿ ನಿಲಯಪಾಲಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವುದಾಗಿ ಆಶ್ವಾಸನೆ ನೀಡಿದರು. ಹಾಸ್ಟೆಲ್ಗಳಲ್ಲಿ ಇರುವ 400 ವಿದ್ಯಾರ್ಥಿಗಳು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಪತ್ರ ಕೊಟ್ಟು ಕೇಳಿಕೊಂಡರು.

ಹಾಸ್ಟೆಲಿಗೆ ಭೇಟಿ ಕೊಟ್ಟಾಗ ವಿವಿಯ ವಿದ್ಯಾರ್ಥಿಗಳಾದ ನಿಹಾರಿಕಾ ಆರ್., ಅರುಣ್ ಭಗತ್, ಭಾಗ್ಯ ಬಾಯಿ, ಮಂಜುನಾಥ, ಹನುಮೇಶ ಬನ್ನಿಕೊಪ್ಪ, ಬಾರೇಶ್, ವಿನಯ್ ಕುಮಾರ್, ಮಹೇಶ್ ನಾಯಕ ಮುಂತಾದವರು ಹಾಜರಿದ್ದರು.