
ನವದೆಹಲಿ, ಮೇ ೧೭: ಸುಪ್ರೀಂಕೋರ್ಟ್‌ಗೆ ಹೆಚ್ಚುವರಿಯಾಗಿ ನಾಲ್ವರು ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಅಧ್ಯಾದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ನ್ಯಾಯ ವಿತರಣೆಯನ್ನು ವೇಗಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ೩೩ರಿಂದ ೩೭ಕ್ಕೆ ಹೆಚ್ಚಿಸುವ ಅಧ್ಯಾದೇಶವನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ಮುಖ್ಯ ನ್ಯಾಯಮೂರ್ತಿಯನ್ನು ಹೊರತುಪಡಿಸಿ ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕಕ್ಕೆ ಈ ಕ್ರಮ ದಾರಿ ಮಾಡಿಕೊಡಲಿದೆ.
ಈ ಸಂಬಂಧ “ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಅಧ್ಯಾದೇಶ ೨೦೨೬”ಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅನುಮೋದನೆ ನೀಡಿದ್ದು, ಗಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಸಂಸತ್ ಅಧಿವೇಶನ ನಡೆಯದಿರುವ ಕಾರಣ ಸಂವಿಧಾನದ ೧೨೩ನೇ ವಿಧಿಯಡಿ ಕೇಂದ್ರ ಸರ್ಕಾರ ಅಧ್ಯಾದೇಶ ಹೊರಡಿಸದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಕೆಲ ದಿನಗಳ ಹಿಂದೆ ಈ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ವರ್ಷದ ಆರಂಭದಲ್ಲೇ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ೯೨ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಸಂವಿಧಾನ ಪೀಠಗಳನ್ನು ನಿಯಮಿತವಾಗಿ ರಚಿಸಲು ನ್ಯಾಯಮೂರ್ತಿಗಳ ಕೊರತೆ ಅಡ್ಡಿಯಾಗುತ್ತಿದೆ ಎಂಬ ಆತಂಕದ ನಡುವೆ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.
೨೦೧೯ರಲ್ಲಿ ಕೊನೆಯದಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ೩೦ರಿಂದ ೩೩ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಆರು ವರ್ಷಗಳ ಬಳಿಕ ಮತ್ತೆ ಹೆಚ್ಚಳ ಮಾಡಲಾಗಿದೆ.
ಸಂವಿಧಾನದ ೧೨೪(೧)ನೇ ವಿಧಿಯ ಪ್ರಕಾರ ಸುಪ್ರೀಂ ಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಸಂಸತ್ತು ಕಾನೂನಿನ ಮೂಲಕ ನಿಗದಿಪಡಿಸಬಹುದು. ಪ್ರಕರಣಗಳ ಹೆಚ್ಚಳಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ವ್ಯವಸ್ಥೆ ಇದೆ.
ನ್ಯಾಯಮೂರ್ತಿಗಳ ಸಂಖ್ಯೆ ೩೭ಕ್ಕೆ ಏರಿಕೆಯಾಗುವುದರಿಂದ, ಮುಂದಿನ ತಿಂಗಳುಗಳಲ್ಲಿ ಹಲವು ಹೊಸ ನೇಮಕಾತಿಗಳು ನಡೆಯಲಿವೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಅವಧಿಯಲ್ಲಿ ಒಟ್ಟು ೧೦ ಹುದ್ದೆಗಳು ಭರ್ತಿಯಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಈ ವರ್ಷ ಹಲವು ನಿವೃತ್ತಿಗಳೂ ಎದುರಾಗಲಿವೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಜೂನ್ ೬ರಂದು, ಜೆ.ಕೆ. ಮಹೇಶ್ವರಿ ಜೂನ್ ೨೮ರಂದು, ಸಂಜಯ್ ಕರೋಲ್ ಆಗಸ್ಟ್ ೨೮ರಂದು ಹಾಗೂ ಸತೀಶ್ ಚಂದ್ರ ಶರ್ಮಾ ನವೆಂಬರ್ ೨೯ರಂದು ನಿವೃತ್ತಿಯಾಗಲಿದ್ದಾರೆ.
೧೯೫೦ರ ಜನವರಿ ೨೮ರಂದು ಸ್ಥಾಪನೆಯಾದ ಸುಪ್ರೀಂ ಕೋರ್ಟ್ ಆರಂಭದಲ್ಲಿ ಒಟ್ಟು ಎಂಟು ನ್ಯಾಯಮೂರ್ತಿಗಳೊಂದಿಗೆ ಕಾರ್ಯಾರಂಭ ಮಾಡಿತ್ತು. ನಂತರ ೧೯೬೦, ೧೯೭೭, ೧೯೮೬, ೨೦೦೮ ಹಾಗೂ ೨೦೧೯ರಲ್ಲಿ ಹಂತ ಹಂತವಾಗಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು.

























