Home ಜಿಲ್ಲೆ ಮಂಗಳೂರು ಯುವಜನತೆಯನ್ನು ಕೆರಳಿಸುವುದು ಹಿಂದುತ್ವ ಅಲ್ಲ- ಶಾಸಕ ಅಶೋಕ್ ರೈ

ಯುವಜನತೆಯನ್ನು ಕೆರಳಿಸುವುದು ಹಿಂದುತ್ವ ಅಲ್ಲ- ಶಾಸಕ ಅಶೋಕ್ ರೈ

ಪುತ್ತೂರು: ಧಾರ್ಮಿಕ ಮತ್ತು ರಾಜಕೀಯ ವೇದಿಕೆಗಳಲ್ಲಿ ಶಾಲು ಹಾಕಿ ಬೊಂಡ ಕುಡಿದು ಯುವಜನತೆಯನ್ನು ಕೆರಳಿಸುವುದು ಹಿಂದುತ್ವ ಅಲ್ಲ. ಹಿಂದೂ ಧರ್ಮ ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿ ಮಾಡುವುದೇ ನೈಜವಾದ ಹಿಂದುತ್ವ. ಇದನ್ನು ನಾನು ಮಾಡಿ ತೋರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಬೆಟ್ಟಂಪಾಡಿ ಗ್ರಾಪಂ ಹಾಗೂ ಇರ್ದೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಲ್ಲಿ ಬೆಟ್ಟಂಪಾಡಿ ಗ್ರಾಮಕ್ಕೆ ರೂ.೧೧.೪೮ ಕೋಟಿ ಅನುದಾನ ದೊರೆತಿದೆ. ಇಲ್ಲಿನ ರಸ್ತೆಗಳು, ಧಾರ್ಮಿಕ ತಾಣಗಳು, ಸೇತುವೆಗಳು ಅಭಿವೃದ್ಧಿಯಾಗಿವೆ. ಆದರೆ ಚುನಾವಣೆಯ ಸಂದರ್ಭ ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿ ರಾಜಕೀಯ ಲಾಭ ಪಡೆದುಕೊಂಡವರು ಏನು ಮಾಡಿದ್ದಾರೆ. ಕನಿಷ್ಠ ಹಿಂದೂ ಧಾರ್ಮಿಕ ತಾಣಗಳಿಗೆ ಅನುದಾನ ನೀಡಲೂ ಅವರಿಂದ ಸಾಧ್ಯವಾಗಿಲ್ಲ. ಧಾರ್ಮಿಕ ಕೇಂದ್ರಗಳ ಜಾಗವನ್ನು ದೈವ ದೇವರ ಹೆಸರಿಗೆ ಮಾಡಿಸಲೂ ಅವರು ಮುಂದಾಗಿಲ್ಲ. ಆದರೆ ನಾನು ಯಾವುದೇ ರಾಜಕೀಯ ಮಾಡದೆ ರಾಜಧರ್ಮ ಪಾಲನೆಯ ಮೂಲಕ ಅಭಿವೃದ್ಧಿ ಮಾಡುತ್ತಿದ್ದೇನೆ. ನನಗೆ ಬೇರೆ ಯಾವುದೂ ಬೇಡ. ಮುಂದಿನ ಬಾರಿ ನನ್ನ ಜತೆಗೆ ಕೈ ಜೋಡಿಸಿ ಅಷ್ಟು ಸಾಕು ಎಂದವರು ಹೇಳಿದರು.
ಪಂಚ ಗ್ಯಾರಂಟಿ ‘ಕುಟುಂಬ ಸದೃಢ’
ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಸರ್ಕಾರಗಳೂ ಬಡವರ ಪರವಾಗಿರುವ ಇಂತಹ ಗ್ಯಾರಂಟಿಗಳನ್ನು ನೀಡಿಲ್ಲ. ಕಾಂಗ್ರೇಸ್ ಸರ್ಕಾರದಿಂದ ಮಾತ್ರ ಬಡವರ ಪರ ಯೋಜನೆಗಳನ್ನು ತರುವುದು ಸಾಧ್ಯ. ರಾಜ್ಯ ಸರ್ಕಾರದ ಈ ಕೊಡುಗೆಯನ್ನು ‘ಬಿಟ್ಟಿ ಭಾಗ್ಯ ಎಂದು ಲೇವಡಿ ಮಾಡುತ್ತಿದ್ದ ಬಿಜೆಪಿ ಈಗ ಬೇರೆ ರಾಜ್ಯಗಳಲ್ಲಿ ಕರ್ನಾಟಕದ ಮಾದರಿಯ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡುತ್ತಿದೆ. ಪಂಚಗ್ಯಾರಂಟಿಗಳಿಂದ ಬಡವರ ಕುಟುಂಬಗಳ ಸದೃಢವಾಗಿವೆ. ಇಂತಹ ಭಾಗ್ಯ ಕಾಂಗ್ರೇಸ್ ನೀಡಿದ ಕೊಡುಗೆಯಾಗಿದೆ ಎಂಬುವುದನ್ನು ಜನತೆ ಮರೆಯಬಾರದು ಎಂದರು.
ಕಳೆದ ೪೦ ವರ್ಷಗಳಿಂದ ಮುಳಗುಸೇತುವೆಯಾಗಿಯೇ ಉಳಿದಿದ್ದ ಚೆಲ್ಯಡ್ಕ ಸೇತುವೆಗೆ ಅನುದಾನ ತಂದಿದ್ದೇನೆ. ಇನ್ನು ಮುಂದೆ ಮಳೆಗಾಲದಲ್ಲಿ ಈ ಹೊಸ ಸೇತುವೆ ಮುಳುಗುವುದಿಲ್ಲ. ಚೆಲ್ಯಡ್ಕದ ಸೇತುವೆ ಬಳಿ ಹಿಂದಿನ ಶಾಸಕರು ೨ ಕೋಟಿ ವೆಚ್ಚದಲ್ಲಿ ವೃತ್ತ ನಿರ್ಮಾಣ ಮಾಡಿಸಿದ್ದರು. ಅದರ ಕಥೆ ಏನಾಗಿದೆ ಎಂಬುವುದು ನಿಮಗೆಲ್ಲಾ ಗೊತ್ತಿದೆ. ಅದೇ ಹಣದಿಂದ ಚೆಲ್ಯಡ್ಕ ಸೇತುವೆ ನಿರ್ಮಾಣ ಮಾಡಬಹುದಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಆಳ್ವ, ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿದರು.
ಪುತ್ತೂರು ಬ್ಲಾಕ್ ಪ್ರ. ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಆರ್ಯಾಪು ವಲಯ ಅಧ್ಯಕ್ಷ ಗಿರೀಶ್ ರೈ, ಸತೀಶ್ ನಿಡ್ಪಳ್ಳಿ, ಮೊಯಿದು ಕೋನಡ್ಕ, ಶಾಫಿ ಕೇಕನಾಜೆ ಮತ್ತಿತರರು ಭಾಗಿಯಾಗಿದ್ದರು.
ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತ ದಲಿತ ಮುಖಂಡ ಅಮುನಿ ಗುಂಡ್ಯಡ್ಕ ವರ ಮನೆಯಲ್ಲಿ ಶಾಸಕರು ಮಧ್ಯಾಹ್ನದ ಭೋಜನ ಮಾಡಿದರು. ಈ ಸಂದರ್ಭ ಅಮುನಿ ಗುಂಡ್ಯಡ್ಕ ದಂಪತಿಗಳನ್ನು ಶಾಸಕರು ಶಾಲು ಹಾಕಿ ಗೌರವಿಸಿದರು.
—ಬಾಕ್ಸ್ ಐಟಂ–
‘ಕಲ್ಕುಡ-ಕಲ್ಲುರ್ಟಿ ತಾಣಕ್ಕೆ ಮೊದಲ ಅನುದಾನ
ಇರ್ದೆಯ ಕಲ್ಕುಡ-ಕಲ್ಲುರ್ಟಿ ತಾಣಕ್ಕೆ ಈತನಕ ಯಾವುದೇ ಶಾಸಕರೂ ಅನುದಾನ ನೀಡಿಲ್ಲ. ಮೊಟ್ಟ ಮೊದಲ ಬಾರಿಗೆ ಶಾಸಕ ಅಶೋಕ್ ರೈ ಅವರು ಅನುದಾನ ನೀಡಿದ್ದಾರೆ. ರೂ.೧೦ ಲಕ್ಷ ನೀಡಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಈ ದೈವಸ್ಥಾನದ ಮುಂದೆ ನಿಂತು ಹೇಳುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಜತೆಗೆ ನಾವಿದ್ದೇವೆ. ನಮಗೆ ಅಭಿವೃದ್ಧಿ ಪರ ಶಾಸಕರು ಬೇಕು- ದೈವಸ್ಥಾನದ ಪ್ರಮುಖರು.