Home ಮುಖಪುಟ ಸುದ್ದಿ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ; 93.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ; 93.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ

ನವದೆಹಲಿ,ಏ.15- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 10ನೇ ತರಗತಿಯ 2026ರ ಫಲಿತಾಂಶ ಪ್ರಕಟಗೊಂಡಿದ್ದು, ಶೇ 93.70ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷದ ಶೇ 93.66 ಕ್ಕೆ ಹೋಲಿಸಿದರೆ ಶೇ 0.04ರಷ್ಟು ಹೆಚ್ಚಳವಾಗಿದೆ.


ಸುಮಾರು 16.3 ಮಿಲಿಯನ್ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ದಾಖಲೆ ಸಮಯದಲ್ಲಿ ಸಿಬಿಎಸ್​ಸಿ ಪೂರ್ಣಗೊಳಿಸಿದೆ. ಸಾಮಾನ್ಯವಾಗಿ ಮೇ ಮಧ್ಯದಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ, ಈ ಬಾರಿ ಏಪ್ರಿಲ್​ ನಲ್ಲಿ ಫಲಿತಾಂಶ ಘೋಷಣೆ ಮಾಡಲಾಗಿದೆ.


ದ್ವಿ ಪರೀಕ್ಷಾ ವ್ಯವಸ್ಥೆ, ಪಾರದರ್ಶಕ ಮೌಲ್ಯಮಾಪನ ಪ್ರಕ್ರಿಯೆ ಮತ್ತು ಹೊಸ ಶಿಕ್ಷಣ ನೀತಿ (ಎನ್ ಇಪಿ) ಅಡಿಯಲ್ಲಿ ಜಾರಿಗೆ ತರಲಾದ ತಾಂತ್ರಿಕ ಸುಧಾರಣೆಗಳು ಈ ವರ್ಷದ ಫಲಿತಾಂಶಗಳನ್ನು ಅಸಾಧಾರಣವಾಗಿಸಿದೆ ಎಂದು ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಬಾಲಕಿಯರೇ ಮೇಲುಗೈ:
ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಎಂದಿನಂತ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 93.70 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶೇ. 94.99 ರಷ್ಟು ಬಾಲಕಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹುಡುಗರ ಉತ್ತೀರ್ಣದ ಶೇಕಡಾವಾರಿಗಿಂತ ಶೇ. 1.3 ರಷ್ಟು ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಒಟ್ಟು 55,368 ವಿದ್ಯಾರ್ಥಿಗಳು ಶೇ. 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಮತ್ತು 2,21,574 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಾರಿ 8,074 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 24.71 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.


ಸಿಬಿಎಸ್‌ಇ ವೆಬ್‌ಸೈಟ್: https://results.cbse.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅವರು cbse.gov.in ಮತ್ತು digilocker (www.digilocker.gov.in) ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಬಹುದು.


ಸಿಬಿಎಸ್‌ಇ ತನ್ನ ವೆಬ್‌ಸೈಟ್‌ನಲ್ಲಿ ಮೂರು ಲಿಂಕ್‌ಗಳನ್ನು ಬಿಡುಗಡೆ ಮಾಡಿದೆ, ಅಲ್ಲಿ ವಿದ್ಯಾರ್ಥಿಗಳು ತಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ, ಜನ್ಮ ದಿನಾಂಕ ಮತ್ತು ಪ್ರವೇಶ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು