Home ಜಿಲ್ಲೆ ಮಂಗಳೂರು ‘ಪುತ್ತೂರ್‍ದ ಜಾತ್ರೆ ಬಲ್ನಾಡಿನಿಂದ ಭಂಡಾರ ಆಗಮನ ಸಣ್ಣ ರಥೋತ್ಸವ-ಕೆರೆ ಆಯನದ ಸಂಭ್ರಮ

‘ಪುತ್ತೂರ್‍ದ ಜಾತ್ರೆ ಬಲ್ನಾಡಿನಿಂದ ಭಂಡಾರ ಆಗಮನ ಸಣ್ಣ ರಥೋತ್ಸವ-ಕೆರೆ ಆಯನದ ಸಂಭ್ರಮ

ಪುತ್ತೂರು; ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ವರ್ಷಾವಧಿ ’ಪುತ್ತೂರ್‍ದ ಜಾತ್ರೆ ಕಳೆದ ಎ.೧೦ರಿಂದ ಆರಂಭಗೊಂಡಿದ್ದು, ಪೇಟೆ ಸವಾರಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ. ಎ.೧೫ರಂದು ಸೌರಯುಗಾದಿ ವಿಷುವಿನ ಅಂಗವಾಗಿ ಹೊರಾಂಗಣದಲ್ಲಿ ದೇವರ ಬಲಿ ಉತ್ಸವ ನಡೆದ ಬಳಿಕ ಪೂರ್ವಶಿಷ್ಟ ಸಂಪ್ರದಾಯದಂತೆ ದೇವರ ಚಂದ್ರಮಂಡಲ ಉತ್ಸವ ನಡೆದು ಅನಂತರ ದೇವರ ಪೇಟೆ ಸವಾರಿ ನಡೆಯಿತು.
ಎ.೧೭ರಂದು ಮಹಾಬ್ರಹ್ಮ ರಥೋತ್ಸವ ಹಾಗೂ ಪುತ್ತೂರು ಬೆಡಿ ವಿಶೇಷ ಆಕರ್ಷಣೆಯಾಗಿ ಮೂಡಿಬರಲಿದೆ.
ಎ>೧೬ರಂದು ದೇವಳದಲ್ಲಿ ಬೆಳಿಗ್ಗೆ ತುಲಾಭಾರ ಸೇವೆ ನಡೆಯಲಿದೆ. ರಾತ್ರಿ ಉತ್ಸವ ಹಾಗೂ ಬಲ್ನಾಡು ಶ್ರೀದಂಡನಾಯಕ-ಉಳ್ಳಾಲ್ತಿ ದೈವಗಳ ಭಂಡಾರ ಆಗಮನವಾಗಲಿದೆ. ಬಳಿಕ ಸಣ್ಣ ರಥೋತ್ಸವ ನಡೆಯಲಿದೆ. ವಿಶೇಷವಾಗಿ ಕೆರೆ ಆಯನ ಮತ್ತು ತೆಪ್ಪೋತ್ಸವ ಭಕ್ತರ ಕಣ್ ಮನ ತಣಿಸಲಿದೆ.


ಎ.೧೬;ಬಲ್ನಾಡಿನಿಂದ ಭಂಡಾರ ಆಗಮನ
ದೇವಳದಲ್ಲಿ ಸಣ್ಣ ರಥೋತ್ಸವ, ಕೆರೆ ಉತ್ಸವ
ಪುತ್ತೂರು: ಮಹತೋಭಾರ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಪ್ರಯುಕ್ತ ಎ. ೧೬ ರಂದು ಸಂಜೆ ದೇವಾಲಯದ ಒಳಾಂಗಣದಲ್ಲಿ ದೇವರ ದೀಪ ಬಲಿ ಉತ್ಸವ, ರಾತ್ರಿ ಉತ್ಸವ ಬಲಿ, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ದೇವಳಕ್ಕೆ ಆಗಮಿಸಲಿದೆ. ಬಳಿಕ ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವ ಮತ್ತು ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ.
ಮಲ್ಲಿಗೆ ಹೂವು ಸಮರ್ಪಣೆ
ಮಹಾಲಿಂಗೇಶ್ವರ ದೇವಾಲಯದ ಸಣ್ಣ ರಥೋತ್ಸವದ ದಿನವಾದ ಎ. ೧೬ ರಂದು ದೇವಾಲಯಕ್ಕೆ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ವಿವಿಧ ಬಿರುದಾವಳಿಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಮಲ್ಲಿಗೆ ಹೂವು ಸಮರ್ಪಣೆ ಸೇವೆ ಮಾಡುತ್ತಾರೆ.
ಮಲ್ಲಿಗೆ ಚೆಂಡುಗಳನ್ನು ದೈವಗಳಿಗೆ ಬಲ್ನಾಡಿನಲ್ಲಿ, ಪುತ್ತೂರು ದೇವಾಲಯದಲ್ಲಿ ಮತ್ತು ಪುತ್ತೂರು ಹಳೆ ಪೊಲೀಸ್ ಠಾಣೆಯ ಬಳಿ ಇರುವ ಅಂಕದ ಕಟ್ಟೆಯ ಬಳಿ ಸಮರ್ಪಿಸುತ್ತಾರೆ. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಮಲ್ಲಿಗೆ ಹೂವಿನ ವ್ಯಾಪಾರಸ್ಥರು ಪುತ್ತೂರಿಗೆ ಆಗಮಿಸುತ್ತಾರೆ.
ಧಾರ್ಮಿಕ ಸಂಬಂಧ
ಸೀಮೆಯ ಮಹಾಲಿಂಗೇಶ್ವರ ದೇವರಿಗೂ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೂ ನೇರ ಧಾರ್ಮಿಕ ಸಂಬಂಧವಿದೆ. ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ದೈವಗಳ ಭಂಡಾರ ದೇವಳಕ್ಕೆ ಆಗಮಿಸುತ್ತದೆ. ದೇವಳದ ಹೊರಾಂಗಣದಲ್ಲಿ ದೇವ – ದೈವ ಭೇಟಿ ನಡೆದು ಸಾಂಪ್ರದಾಯಿಕ ನುಡಿಕಟ್ಟು ನಡೆದ ಬಳಿಕ ದೈವಗಳ ಭಂಡಾರದ ಜತೆಗೆ ದೇವರ ಉತ್ಸವ ನಡೆಯುತ್ತದೆ. ಎ. ೧೭ ರಂದು ಬ್ರಹ್ಮರಥೋತ್ಸವ ಮುಗಿದ ಬಳಿಕ ದೈವಗಳ ಭಂಡಾರವನ್ನು ಬಂಗಾರ ಕಾಯರ್‌ಕಟ್ಟೆಯ ಬಳಿ ದೇವರ ಪೇಟೆ ಸವಾರಿಯೊಂದಿಗೆ ಬೀಳ್ಕೊಡಲಾಗುತ್ತದೆ. ಈ ಶಿಷ್ಟ ಸಂಪ್ರದಾಯವನ್ನು ಜಾತ್ರೆಯ ಸಂದರ್ಭದಲ್ಲಿ ಪಾಲಿಸಲಾಗುತ್ತದೆ.